ಶಿರಾ: ಶಿರಾ ನಗರದ ಹೆಸರಾಂತ ಜಾಜಮ್ಮನಕಟ್ಟೆ ಕೆರೆಯ ಪುನಶ್ಚೇತನ ಕಾರ್ಯಕ್ಕೆ ನಾಂದಿ ದೊರೆತಿದ್ದು, ಈ ಸಂಬಂಧ ಶಾಸಕ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಗರ ಆಡಳಿತ ಅಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಲಾಯಿತು.
ಕಲ್ಲುಕೋಟೆ ಸರ್ವೆ ನಂ. 40ರ ವ್ಯಾಪ್ತಿಯಲ್ಲಿರುವ ಈ ಕೆರೆ 22 ಎಕರೆ 33 ಗುಂಟೆ ವಿಸ್ತೀರ್ಣ ಹೊಂದಿದ್ದು, ಬಾಲಾಜಿನಗರ, ವಿದ್ಯಾನಗರ, ಸಪ್ತಗಿರಿ ಬಡಾವಣೆಗಳಿಂದ ಸುತ್ತುವರೆದಿದೆ. ಆದರೆ ಪ್ರಸ್ತುತ ಈ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಇದರ ವಿಸ್ತೀರ್ಣ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಈ ಕೆರೆಯು ಇತ್ತೀಚಿನ ದಿನದಲ್ಲಿ ತ್ಯಾಜ್ಯ ಹಾಗೂ ಕಸ ಸಂಗ್ರಹ ಸ್ಥಳವಾಗಿ ಪರಿವರ್ತಿತವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಭೆಯಲ್ಲಿ, ಕೆರೆಯೊಳಗಿನ ಹೂಳು ತೆಗೆಯುವುದು, ಒಳಚರಂಡಿ ನೀರು ನೇರವಾಗಿ ಕೆರೆಗೆ ಸೇರುವುದನ್ನು ತಡೆಯುವ ವ್ಯವಸ್ಥೆ, ಹಾಗೂ ಜೌಗು ಪ್ರದೇಶ ಸೃಷ್ಟಿ ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯ ಪರಿಸರಕ್ಕೆ ಅನುಕೂಲವಾಗುವ ನಿಂಫಿಯಾ ಮತ್ತು ಕೊಲೊಕಾಸಿಯಾ ಸಸ್ಯಗಳನ್ನು ನೆಡುವುದರ ಮೂಲಕ ಜೀವವೈವಿಧ್ಯತೆಯ ಪುನಶ್ಚೇತನಕ್ಕೆ ಪೂರಕವಾದ ಕ್ರಮಗಳು ತೆಗೆದುಕೊಳ್ಳಲಾಗಿದ್ದು, ಕೆರೆಯ ಬಳಿಯೇ ಕಲ್ಯಾಣಿಯನ್ನು ಸಹ ನಿರ್ಮಿಸಲಾಗಿದೆ.
“ಪ್ರತಿ ಐದು ವರ್ಷಕ್ಕೊಮ್ಮೆ ಈ ಕೆರೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ತೊಡಗಿಸಲಾಗುತ್ತಿದೆ. ಆದರೆ, ನಿಜವಾದ ಫಲವಿಲ್ಲದಿರುವುದು ಆತಂಕಕಾರಿ. ಈ ಬಾರಿ ಜವಾಬ್ದಾರಿಯುತ ಅಭಿವೃದ್ಧಿಗೆ ಚಾಲನೆ ನೀಡಬೇಕು,” ಎಂದು ಶಾಸಕ ಜಯಚಂದ್ರ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಈ ಯೋಜನೆಗೆ ಮುಂದಾಗಿದ್ದು, ನಗರಸಭೆಯು ಕೂಡ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ಕ್ರಮ ಕೈಗೊಂಡಿದೆ. ಇನ್ನು ಈ ಸಭೆಯಲ್ಲಿ ಯೋಜನಾ ನಿರ್ದೇಶಕ ಪ್ರವೀಣ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಒಟ್ಟಿನಲ್ಲಿ, ಈ ಬಾರಿ ಜಾಜಮ್ಮನಕಟ್ಟೆ ಪುನಶ್ಚೇತನ ಕಾರ್ಯ ಪರಿಣಾಮಕಾರಿಯಾಗಿ ನಡೆದು, ಶಿರಾ ನಗರದಲ್ಲಿ ಶುದ್ಧ ನೀರಿನ ಲಭ್ಯತೆ, ಪರಿಸರ ಸಂರಕ್ಷಣೆ ಹಾಗೂ ಸಮುದಾಯ ಆರೋಗ್ಯಕ್ಕೆ ಮಾರ್ಗದರ್ಶನವಾಗಲಿದೆ ಎಂಬ ನಿರೀಕ್ಷೆ ಮೂಡಿದೆ.