IPL 2025 : ಚೆನ್ನೈ ವಿರುದ್ಧದ ಪಂದ್ಯಕ್ಕೆ ಆರ್‌ ಸಿಬಿಯಲ್ಲಿ ಸಣ್ಣ ಬದಲಾವಣೆ | ಕಣಕ್ಕಿಳಿಯಲಿದ್ದಾರೆ ಸ್ವಿಂಗ್ ಕಿಂಗ್

18ನೇ ಆವೃತ್ತಿಯ ಐಪಿಎಲ್‌ ನಲ್ಲಿ ಆರ್‌ಸಿಬಿ ಭರ್ಜರಿ ಶುಭಾರಂಭ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕೆಕೆಆರ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಬ್ಬರಿಸಿ ಬೊಬ್ಬಿರಿದಿದೆ. ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ಸ್‌ ವಿರುದ್ಧ ಆರ್ಭಟಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಲೂರು ತಂಡ ಇದೀಗ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. ಮಾರ್ಚ್‌ ೨೮ರಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣೆಸಲಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಂಡವೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುತ್ತಾ? ಅಥವಾ ತಂಡದಲ್ಲಿ ಏನಾದರೂ ಬದಲಾವಣೆ ಆಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇದೆ. ಈ ನಡುವೆ ತಂಡದಲ್ಲಿ ಸಣ್ಣದೊಂದು ಬದಲಾವಣೆ ಆಗಬಹುದು ಅನ್ನೋ ಸುದ್ದಿ ಆರ್‌ಸಿಬಿ ಟೀಂ ಮ್ಯಾನೇಜ್‌ಮೆಂಟ್‌ ಕಡೆಯಿಂದ ಬಂದಿದೆ.

ಹೌದು…ಚೆನ್ನೈನ ಎಂ.ಎ ಚಿದಂಬರಂ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಸಣ್ಣ ಬದಲಾವಣೆಯಾಗಲಿದೆ. ಚಾಲೆಂಜರ್ಸ್‌ ಪರ ಸ್ವಿಂಗ್‌ ಕಿಂಗ್‌ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಐಪಿಎಲ್‌ ಅನುಭವಿ ಆಟಗಾರ, ಸ್ವಿಂಗ್‌ ಕಿಂಗ್‌ ಅಂತಲೇ ಕರೆಸಿಕೊಳ್ಳೋ ಭುವನೇಶ್ವರ್‌ ಕುಮಾರ್‌ ಕೆಕೆಆರ್‌ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಎರಡನೇ ಪಂದ್ಯಕ್ಕೆ ಅವರು ಫಿಟ್‌ ಆಗಿದ್ದಾರೆ. ಹೀಗಾಗಿ ಗೆಲುವಿನ ತಂಡದ ಕಾಂಬಿನೇಷನ್‌ನಲ್ಲಿ ಬದಲಾವಣೆಯಾಗಲಿದೆಯಂತೆ.

ಇನ್ನು ಭುವನೇಶ್ವರ್ ಕುಮಾರ್ ಅವರು ತಂಡದಲ್ಲಿ ಸ್ಥಾನ ಪಡೆದರೆ ಹೊರಗುಳಿಯೋದ್ಯಾರು? ಯಾರ ಸ್ಥಾನಕ್ಕೆ ಆಪತ್ತು ಎದುರಾಗಲಿದೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಯುವ ಆಟಗಾರ, ಜಮ್ಮು ಕಾಶ್ಮೀರದ ವೇಗಿ ರಸಿಕ್‌ ಸಲಾಮ್‌ ಅವರು ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದಿದ್ದರು. ಒಳ್ಳೆಯ ಪ್ರದರ್ಶನವನ್ನು ಕೂಡ ನೀಡಿದ್ದರು. 3 ಓವರ್‌ ಬೌಲಿಂಗ್ ನಡೆಸಿದ್ದ ರಸಿಕ್‌ ಸಲಾಮ್‌ 35 ರನ್‌ ನೀಡಿ 1 ವಿಕೆಟ್ ಕಬಳಿಸಿದ್ರು. ಜೊತೆಗೆ ಮೊದಲ ಪಂದ್ಯದಲ್ಲಿ ಸ್ಪಿನ್ನರ್‌ ಸುಯೇಶ್‌ ಶರ್ಮಾ ಅವರು ಕೂಡ ಕಣಕ್ಕಿಳಿದಿದ್ದರು. ತನ್ನ ಮಾಜಿ ತಂಡದ ವಿರುದ್ಧವೇ ಆಡಿದ್ದ ಸುಯೇಶ್‌ ಶರ್ಮಾ ಸ್ಥಿರ ಪ್ರದರ್ಶನ ನೀಡಿದ್ದರು. ಇದೀಗ ಇವರಿಬ್ಬರ ಸ್ಥಾನದ ಮೇಲೆಯೂ ತೂಗುಗತ್ತಿ ನೇತಾಡುತ್ತಿದೆ. ಸುಯೇಶ್‌ ಶರ್ಮಾ ಅವರು ೪ ಓವರ್‌ಗಳಲ್ಲಿ 47 ರನ್‌ ನೀಡಿದ್ದರು. ಆದರೆ ಇವರು ಆಂಡ್ರೆ ರಸೆಲ್‌ ಅವರ ಮಹತ್ವದ ವಿಕೆಟ್‌ ಪಡೆದಿದ್ದರು. ಹೀಗಾಗಿ ಚೆನ್ನೈನಲ್ಲಿ ಬೌಲ್‌ ಸ್ಪಿನ್ ಆಗುವುದರಿಂದ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ.

ಇನ್ನು ಮೊದಲ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಭುವನೇಶ್ವರ್‌ ಕುಮಾರ್ ತಮ್ಮ ಸ್ವಿಂಗ್ ಜಾದೂ ತೋರಿಸಲು ಸಜ್ಜಾಗಿದ್ದಾರೆ. ಆರ್‌ಸಿಬಿ ಇವರನ್ನು ಮೆಗಾ ಹರಾಜಿನಲ್ಲಿ ಜಿದ್ದಿಗೆ ಬಿದ್ದು ತಂಡಕ್ಕೆ ಸೇರಿಸಿಕೊಂಡಿದ್ದು, ಇದೀಗ ಭುವಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕಣಕ್ಕೆ ಇಳಿಯಲು ಸಜ್ಜಾಗಿದ್ದು, ಚೆನ್ನೈ ವಿರುದ್ಧ ಸ್ವಿಂಗ್‌ ಕಿಂಗ್‌ ಹೇಗೆ ಪ್ರದರ್ಶನ ನೀಡ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

Author:

...
Editor

ManyaSoft Admin

share
No Reviews