India : ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಲು ಬಂದವರು, ಇಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಮಣ್ಣಾಗಿದ್ದಾರೆ" ಎಂದು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.
ರಾಜಾಸ್ಥಾನದ ದೇಶ್ನೋಕೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಿದೆ. ದೇಶವು ಎಂದಿಗೂ ಕೂಡ ಭಯೋತ್ಪಾದಕರ ಮುಂದೆ ಮಂಡಿಯೂರಲ್ಲ. ಭಯೋತ್ಪಾದನೆಯನ್ನು ಅಳಿಸಿ ಹಾಕದ ಹೊರತು ನಾವು ನಿದ್ರಿಸೊಲ್ಲ ಎಂದು ಗುಡುಗಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನಾ ನೀತಿಯ ವಿರುದ್ಧ ನಮ್ಮ ಸಶಸ್ತ್ರ ಪಡೆಗಳಿಗೆ ಪರಮಾಧಿಕಾರ ನೀಡಲಾಗಿದೆ. ಪಾಕಿಸ್ತಾನ ಸೇನೆ ಮತ್ತು ಅದರ ಆರ್ಥಿಕತೆಯು ಪ್ರತಿಯೊಂದು ಭಯೋತ್ಪಾದಕ ದಾಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತ ಸ್ಪಷ್ಟಪಡಿಸಿದೆ ಎಂದರು.
ಭಾರತೀಯರ ರಕ್ತದೊಂದಿಗೆ ಆಟವಾಡಿದ್ದಕ್ಕಾಗಿ ಪಾಕಿಸ್ತಾನ ಭಾರೀ ಬೆಲೆ ತೆರಲೇಬೇಕು. ಭಾರತಕ್ಕೆ ನ್ಯಾಯಯುತವಾಗಿ ಸೇರಬೇಕಾದ ನೀರು ಪಾಕ್‌ಗೆ ಇನ್ನು ಮುಂದೆ ಸಿಗುವುದಿಲ್ಲ ಎಂದು ಹೇಳುವ ಮೂಲಕ ಸಿಂಧು ನದಿ ನೀರು ಒಪ್ಪಂದ ಅಮಾನತು ಮುಂದುವರಿಯಲಿದೆ ಎಂಬುದನ್ನು ತಿಳಿಸಿದರು.
ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಸೇನಾ ಕಾರ್ಯಚರಣೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಭಾರತ ವಿರೋಧಿ ಚಟುವಟಿಕೆ ನಡೆಸುವವರಿಗೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ" ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.