INDIA : ಕಾಶ್ಮೀರ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದು 26 ಜನರನ್ನು ಹತ್ಯೆ ಮಾಡಿದ್ದರು, ಅದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಭಾರತದ ದಾಳಿಗೆ ನಡುಗಿದ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಯಿತು. ಅದರಂತೆ ಎರಡು ದೇಶಗಳು ಕದನ ವಿರಾಮ ಒಪ್ಪಿಗೆ ಸೂಚಿಸಿದ್ದವು. ಇದೆಲ್ಲದರ ನಡುವೆ ಎರಡು ದೇಶಗಳ ನಡುವೆ ನಡೆಯುತ್ತಿದ್ದ ಬೀಟಿಂಗ್ ರಿಟ್ರೀಟ್(ಕವಾಯತ್)ಗೆ ಫುಲ್ ಸ್ಟಾಪ್ ಇಡಲಾಯಿಗಿತ್ತು. ಆದರೆ, ಇಂದಿನಿಂದ ಗಡಿಯಲ್ಲಿ ಭದ್ರತಾ ಪಡೆಗಳ ಕವಾಯತ್ ನಡೆಯಲಿದೆ. ಈ ಕವಾಯತ್ ವೀಕ್ಷಿಸಲು ಲಕ್ಷಾಂತರ ಜನ ಈ ಗಡಿಗೆ ಬರ್ತಾರೆ. ಇಲ್ಲಿ ನಡೆಯುವ ಎರಡು ಭದ್ರತಾ ಪಡೆಗಳ ಕವಾಯತನ್ನು ಕಂಡು ಹರ್ಷೋದ್ಘಾರ ಕೂಗಿ ದೇಶ ಪ್ರೇಮ ಮೆರೆಯುತ್ತಾರೆ.
ಆಪರೇಷನ್ ಸಿಂಧೂರ್ ಬಳಿಕೆ ಪಂಜಾಬ್ನ ಗಡಿಯ ಮೂರು ಚೆಕ್ಪೋಸ್ಟ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ಬೀಟಿಂಗ್ ರಿಟ್ರೀಟ್ (ಕವಾಯತ್) ಇಂದು ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. ಮೇ 9 ರಂದು ನಡೆಯಬೇಕಿದ್ದ ಬೀಟಿಂಗ್ ರಿಟ್ರೀಟ್ ಯುದ್ದದ ಕಾರಣಕ್ಕೆ ನಿಲ್ಲಿಸಲಾಗಿತ್ತು. ಆದರೆ ಇಂದು ಎರಡು ದೇಶಗಳ ನಡುವೆ ಕದನ ವಿರಾಮವಾಗಿರುವ ಕಾರಣ ಮತ್ತೆ ಭದ್ರತಾ ಪಡೆಗಳ ಕವಾಯತ್ ಶುರುವಾಗಲಿದೆ. ಎರಡು ದೇಶಗಳ ಜನರು ಗಡಿ ಭಾಗದಲ್ಲಿ ಸೇರಿ ತಮ್ಮ ದೇಶದ ಕವಾಯತ್ತನ್ನು ಹೆಮ್ಮೆಯಿಂದ ಸಂಭ್ರಮಿಸುತ್ತಾರೆ.
ಅಟ್ಟಾರಿ - ವಾಘಾ, ಹುಸೇನಿವಾಲಾ ಮತ್ತು ಸದ್ಕಿ ಜಂಟಿ ಚೆಕ್ ಪೋಸ್ಟ್ಗಳಲ್ಲಿ ಧ್ವಜ ಇಳಿಸುವ ಕಾರ್ಯಕ್ರಮವೇ ಈ ಬೀಟಿಂಗ್ ರಿಟ್ರೀಟ್ ಆಗಿದೆ. ಈ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಪುನಾರಾರಂಭಗೊಳ್ಳಲಿದೆ. ಈ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಿಸ್ತು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸಲಾಗುವುದು. ಗೊತ್ತುಪಡಿಸಿದ ಗಡಿಯಲ್ಲಿ ಬಿಎಸ್ಎಫ್ ಮತ್ತು ಪಾಕಿಸ್ತಾನಿ ಸೇನೆ ಮುಖಾಮುಖಿಯಾಗಿ ಈ ಕವಾಯತು ನಡೆಸುತ್ತದೆ. ಈ ಕಾರ್ಯಕ್ರಮ ಪ್ರಮುಖವಾಗಿ ಮೂರು ಗಡಿಗಳಲ್ಲಿ ನಡೆಯುತ್ತದೆ. ಅಮೃತ್ಸರದ ಅಟ್ಟಾರಿ ಗಡಿ, ಫಿರೋಜ್ಪುರ್ನ ಹುಸೇನಿ ವಾಲಾ ಮತ್ತು ಫಾಜಿಲ್ಕಾ ಜಿಲ್ಲೆಯ ಸದ್ಕಿಯಲ್ಲಿ ಸಾಗುತ್ತದೆ.
ಇನ್ನು ಎರಡೂ ರಾಷ್ಟ್ರಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುವ ಧ್ವಜಗಳನ್ನು ಇಳಿಸುವ ಕಾರ್ಯಕ್ರಮ ಹಾಗೂ ಕವಾಯತುಗಳನ್ನು ವೀಕ್ಷಿಸಲು ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಮತ್ತು ಪ್ರವಾಸಿಗರು ಸೇರುತ್ತಾರೆ. ಈ ಕವಾಯತ್ ಪುನರ್ ಆರಂಭವಾಗುತ್ತಿರುವ ಹಿನ್ನೆಲೆ ಪ್ರವಾಸಿಗರನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲ ಭದ್ರತೆ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಭದ್ರತಾ ಕಾಳಜಿಗಳು ಮತ್ತು ಸಾಂಕ್ರಾಮಿಕ ರೋಗ ಸಂಬಂಧಿತ ನಿರ್ಬಂಧಗಳಿಂದಾಗಿ ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇನ್ನೇನು ಎರಡು ದೇಶಗಳ ನಡುವೆ ನಡೆಯುವ ಬೀಟಿಂಗ್ ರಿಟ್ರೀಟ್ ನಡೆಯುತ್ತೆ ಅನ್ನೋವಷ್ಟರಲ್ಲಿ ಯುದ್ಧ ಸಂಭವಿಸಿತ್ತು. ಇದೀಗ ಯುದ್ಧ ನಿಂತ ಕಾರಣ ಎರಡು ದೇಶಗಳ ಸಂಪರ್ಕ ಕಲ್ಪಿಸುವ ಗಡಿಯಲ್ಲಿ ಮತ್ತೆ ಕವಾಯತ್ ಶುರುವಾಗಿರುವುದು ದೇಶದ ಜನರಲ್ಲಿ ಸಂತಸ ಮೂಡಿಸಿದೆ.