ಚಿಕ್ಕಬಳ್ಳಾಪುರ:
ಖಾಸಗಿ ಕೋಲ್ಡ್ ಸ್ಟೋರೇಜ್ ಮುಂದೆ ಸಾಲುಗಟ್ಟಿ ನಿಂತಿರೋ ಲಾರಿ ಮತ್ತು ಟ್ರ್ಯಾಕ್ಟರ್‌ಗಳು. ಅವುಗಳ ಮೇಲಿರೋ ಆಲೂಗಡ್ಡೆ ಮೂಟೆಗಳು.. ತಮ್ಮ ಆಲೂಗಡ್ಡೆ ಮೂಟೆಯನ್ನ ಯಾವಾಗ ತಗೋತಾರೋ ಅಂತಾ ಕಾಯುತ್ತಾ ಕುಳಿತಿರುವ ರೈತರು. ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ನಂದಿ ಕೋಲ್ಡ್ ಸ್ಟೋರೇಜ್ ಮುಂದೆ.
ಚಿಕ್ಕಬಳ್ಳಾಪುರ ಜಿಲ್ಲೆ ರಾಗಿ ಜೊತೆಗೆ ಆಲೂಗಡ್ಡೆ ಬೆಳೆಗೆ ಭಾರೀ ಹೆಸರುವಾಸಿಯಾಗಿದೆ. ಇಲ್ಲಿನ ರೈತರು ರಾಗಿ ಜೊತೆಗೆ ಟನ್ ಗಟ್ಟಲೆ ಆಲೂಗಡ್ಡೆಯನ್ನೂ ಬೆಳೆಯುತ್ತಾರೆ. ಹೀಗಾಗಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಯಂತೆ ಆಲೂಗಡ್ಡೆಯನ್ನು ಕೂಡ ಖರೀದಿಸಲು ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆ ರೈತರು ತಾವು ಬೆಳೆದಂತಹ ಆಲೂಗಡ್ಡೆಯನ್ನು ಟ್ರ್ಯಾಕ್ಟರ್ ಹಾಗೂ ಲಾರಿ ಮೂಲಕ ಕೋಲ್ಡ್ ಸ್ಟೋರೇಜ್ ಬಳಿ ಹೊತ್ತು ತಂದಿದ್ದಾರೆ. ಆದ್ರೆ ಕೋಲ್ಡ್ ಸ್ಟೋರೇಜ್ ಬಳಿ ಬಂದು ಹತ್ತು ದಿನಗಳು ಕಳೆದರೂ ಆಲೂಗಡೆ ಮೂಟೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಆಲೂಗಡ್ಡೆ ಮೂಟೆಗಳಲ್ಲೇ ಕೊಳೆತು ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಕೋಲ್ಡ್ ಸ್ಟೋರೇಜ್‌ನಲ್ಲಿ ಜಾಗವೇ ಇಲ್ಲ.
ಈ ದಿನಗಳಲ್ಲಿ ರೈತರು ಗುಣಮಟ್ಟದ ಆಲೂಗಡ್ಡೆ ಬೆಳೆದಿದ್ದಾರೆ. ಅದರಲ್ಲೂ ಸಂಕಷ್ಟ ಎದುರಾಗಿ ರೈತರ ಮೇಲೆ ಬರೇ ಬಿದ್ದಂಗಾಗಿದೆ. ಹಾಗಾಗಿರೈತರ ಕಷ್ಟಕ್ಕೆ ಸ್ಟೋರೇಜ್ ಇದ್ದರೂ ಕೂಡ ಎಲ್ಲಾ ಭರ್ತಿಯಾಗಿರುವ ಕಾರಣ ಇನ್ನು ವಿಸ್ತಾರವಾಗಿ ದೊಡ್ಡ ಮಟ್ಟದಲ್ಲಿ ಸ್ಟೋರೇಜ್ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ಜಾಗವಿಲ್ಲವೆಂದು ಕಾಲಕಳೆಯುವ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಶೀಘ್ರವಾಗಿ ನಮ್ಮ ಆಲೂಗಡ್ಡಯನ್ನು ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೈತ ದೇಶದ ಬೆನ್ನೆಲುಬು ಅಂತೆಲ್ಲಾ ಭಾಷಣ ಬಿಗಿಯುತ್ತಾರೆ. ಆದರೆ ಇದೀಗ ಅದೇ ರೈತರಿಗೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕಿದೆ.