ಹುಬ್ಬಳ್ಳಿ :
ಕ್ಷುಲ್ಲಕ ಕಾರಣಕ್ಕೆ 6 ನೇ ತರಗತಿ ಓದುತ್ತಿದ್ದ ಬಾಲಕನೋರ್ವ 9 ನೇ ತರಗತಿ ಓದುತ್ತಿದ್ದ ಬಾಲಕನಿಗೆ ಚಾಕುವಿನಿಂದ ಇರಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಮರಿಪೇಟೆಯ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ. ಕಮರಿಪೇಟೆಯ 14 ವರ್ಷದ ಬಾಲಕ ಚೇತನ್ ಎಂಬಾತ ಮೃತ ದುರ್ದೈವಿಯಾಗಿದ್ದಾನೆ.
ಡಿಜೆ ಮತ್ತು ಲೈಟಿಂಗ್ಸ್ ವಿಷಯಕ್ಕೆ ಅಪ್ರಾಪ್ತ ಬಾಲಕರಿಬ್ಬರ ನಡುವೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ 6 ನೇ ತರಗತಿ ಬಾಲಕ ಮನೆಗೆ ಹೋಗಿ ಚಾಕು ತಂದವನೇ ಬಾಲಕ ಚೇತನ್ ಗೆ ಇರಿದಿದ್ದಾನೆ. ಚಾಕು ಇರಿದ ಪರಿಣಾಮ ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಬಾಲಕ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಇನ್ನು ವಿಷಯ ತಿಳಿದು ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದ ಕಮಿಷನರ್ ನನ್ನ ಜೀವನದಲ್ಲೇ ಇಂತಹ ಘಟನೆಯನ್ನು ನಾನು ನೋಡಿಲ್ಲ ಆರನೇ ತರಗತಿಯ ಬಾಲಕನಿಗೆ ಕೊಲೆ ಮಾಡುವಂತಹ ಮನಸ್ಥಿತಿ ಬಂದಿದೆ ಅಂದರೆ ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ.