ವಿಜಯನಗರ : ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯ ‘ಸಮರ್ಪಣಾ ಸಂಕಲ್ಪ’ ಸಮಾವೇಶ ನಾಳೆ ವಿಜೃಂಭಣೆಯಿಂದ ನಡೆಯಲಿದ್ದು, ಉಕ್ಕಿನ ನಗರಿ ಹೊಸಪೇಟೆಯಲ್ಲಿ ಸಕಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಇಂದು ಅಧಿಕಾರಿಗಳ ಹಾಗೂ ರಾಜಕೀಯ ಗಣ್ಯರ ಜತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭೇಟಿ ನೀಡಿ, ಅಂತಿಮ ತಯಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಡಿಕೆ ಶಿವಕುಮಾರ್ ಮಾತನಾಡಿ ವಿಜಯನಗರ ಜಿಲ್ಲೆ ಅನೇಕ ಇತಿಹಾಸಗಳನ್ನು ತನ್ನೋಳಗಿಟ್ಟುಕೊಂಡಿರುವ ಜಿಲ್ಲೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಅವರು ಹೊಸಪೇಟೆಯಲ್ಲಿ ಭಾಷಣ ಮಾಡಿದ ಇತಿಹಾಸವಿದೆ. ಹೀಗಾಗಿ ನಾಳಿನ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಪುತ್ಥಳಿ ಲೋಕಾರ್ಪಣೆ ಮಾಡುತ್ತಿದ್ದೇವೆ. ಈಗಾಗಲೇ ವಿಜಯನಗರ ಜಿಲ್ಲೆಯಲ್ಲಿ 79 ಸಾವಿರ ರೈತರಿಗೆ ಪೋಡಿ ಹಂಚಿಕೆ ಮಾಡಿ, ಪೋಡಿ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
"ಈ ಎರಡು ವರ್ಷಗಳ ಸಂಭ್ರಮ ಕೇವಲ ಆಚರಣೆಯಲ್ಲ, ನಮಗೆ ಅವಕಾಶ ಕೊಟ್ಟ ಜನರ ಋಣ ತೀರಿಸುವ ಸಂಕಲ್ಪʼʼಎಂದಿದ್ದಾರೆ. ಅಲ್ಲದೇ "ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ" ಎಂಬ ಉದ್ದೇಶದೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ. ಇತರ ಪಕ್ಷಗಳಿಗೂ ನಮ್ಮ ಆಡಳಿತ ಮಾದರಿಯಾಗಿದೆ" ಎಂದರು.