ಬೆಂಗಳೂರು : ಬೆಂಗಳೂರು ಇಸ್ಕಾನ್ ಮತ್ತು ಮುಂಬೈ ಇಸ್ಕಾನ್ (ISKCON Mumbai) ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಇಂದು ತಾರ್ಕಿಕ ಅಂತ್ಯ ನೀಡಿದೆ. ಹರೇ ಕೃಷ್ಣ ಮಂದಿರ ಮತ್ತು ಶೈಕ್ಷಣಿಕ ಸಂಕೀರ್ಣದ ಒಡೆತನದ ಕುರಿತು ನಡೆದ ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರು ಇಸ್ಕಾನ್ ಪರವಾಗಿ ತೀರ್ಪು ನೀಡಿದೆ.
ಈ ಮೊದಲು, 2023 ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ದೇವಾಲಯದ ನಿಯಂತ್ರಣವನ್ನು ಮುಂಬೈ ಇಸ್ಕಾನ್ ಹಸ್ತಾಂತರಿಸುವಂತೆ ಆದೇಶ ನೀಡಲಾಗಿತ್ತು. ಈ ತೀರ್ಪಿಗೆ ವಿರುದ್ಧವಾಗಿ ಬೆಂಗಳೂರು ಇಸ್ಕಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, "ಬೆಂಗಳೂರು ಹರೇ ಕೃಷ್ಣ ದೇವಸ್ಥಾನ ಹಾಗೂ ಶೈಕ್ಷಣಿಕ ಸಂಕೀರ್ಣವು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದವು" ಎಂದು ಸ್ಪಷ್ಟಪಡಿಸಿ, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.
ಈ ತೀರ್ಪು ದೇವಸ್ಥಾನದ ಭಕ್ತರಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ಸ್ಪಷ್ಟತೆಯನ್ನು ಒದಗಿಸಲಿದೆ. ಇನ್ನು ಮುಂದೆ ದೇವಸ್ಥಾನದ ನಿರ್ವಹಣೆಯು ಬೆಂಗಳೂರು ಇಸ್ಕಾನ್ ಸೊಸೈಟಿಯ ಅಧಿಕಾರದಲ್ಲಿಯೇ ಮುಂದುವರಿಯಲಿದೆ.