ಬೆಂಗಳೂರು : ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ. ಈ ವರ್ಷಧಾರೆಯ ಆರ್ಭಟದ ನಡುವೆ ಮಹದೇವಪುರದ ಚನ್ನಸಂದ್ರದಲ್ಲಿ ವಿಷಾದನೀಯ ಘಟನೆ ನಡೆದಿದ್ದು, ಓರ್ವ ಮಹಿಳೆ ಮಳೆಗೆ ಬಲಿಯಾಗಿದ್ದಾರೆ.
ಮೃತ ಮಹಿಳೆಯನ್ನು ಶಶಿಕಲಾ (35) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಶಶಿಕಲಾ ಅವರು ಐ ಝಡ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನು ಮಳೆಗಾಲದ ಕಾರಣದಿಂದಾಗಿ ಗೋಡೆ ಸಂಪೂರ್ಣ ನೆನೆದು ಬಿದ್ದಿದ್ದು, ದುರ್ಬಲಗೊಂಡ ಗೋಡೆ ಶಶಿಕಲಾ ಅವರ ಮೇಲೆ ಕುಸಿದು ಬಿದ್ದ ಪರಿಣಾಮ ಶಶಿಕಲಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೃತ ಶಶಿಕಲಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದು, ಅವರ ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಮೇಲೆ ಮಳೆ ಬೀರಿದ ದುಃಖದ ನೆರಳು ಇದೀಗ ಇಡೀ ಸಮುದಾಯವನ್ನೇ ಬೇಸರಗೊಳಿಸಿದೆ. ಶಶಿಕಲಾ ಅವರು ಶಹಾಪುರ ಮೂಲದವರಾಗಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ತಕ್ಷಣ ಮಹದೇವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.