ಬೆಂಗಳೂರು : ಸತತ ಮಳೆಯಿಂದ ಬೆಂಗಳೂರು ನಗರ ಸಂಪೂರ್ಣ ಜಲಾವೃತವಾಗಿದ್ದು, ಜನರು ನರಳಾಡುತ್ತಿದ್ದಾರೆ, ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ಬಣ್ಣದ ಜಾಹೀರಾತಿನೊಂದಿಗೆ “ಸಾಧನಾ ಸಮಾವೇಶ”ದಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಎಚ್ ಡಿಕೆ ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಬೆಂಗಳೂರು ನಗರ ‘ಬ್ರಾಂಡ್’ ಹೆಸರಿನಲ್ಲಿ ನರಕದ ಗುಂಡಿಯಾಗಿದೆ. ರಸ್ತೆಗಳಲ್ಲಿ ನೀರು ಹರಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೆ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಸರ್ಕಾರ ಸಾಧನಾ ಸಮಾವೇಶದಲ್ಲಿ ಮುಳುಗಿ ಹೋಗಿದೆ. ಇದು ಸಾಧನೆ ಅಲ್ಲ, ಸಾರ್ವಜನಿಕರಿಗೆ ಬೇಸರ ತಂದಿರುವ ಘೋಷಣೆ” ಎಂದು ಕಿಡಿಕಾರಿದ್ದಾರೆ.
"ಬ್ರಾಂಡ್ ಬೆಂಗಳೂರು" ಎನ್ನುವುದು ಜನರ ಮೇಲೆ ಹಣದ ಮಳೆ ಸುರಿಸುವ 'ಕ್ಯಾಶ್ ಡೆವಲಪ್ಮೆಂಟ್ ಡಿಪಾರ್ಟ್‌ಮೆಂಟ್' ಆಗಿ ಪರಿವರ್ತನೆಗೊಂಡಿದೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ, “ಎಷ್ಟು ನೋಟುಗಳ ಮಳೆ ಸುರಿಯಲಾಗಿದೆ ಈ ಎರಡು ವರ್ಷಗಳಲ್ಲಿ? ಯಾವ ಪ್ರದೇಶ ನೋಡಿದರೂ ನಗದು ಹರಿಯುತ್ತಿದೆ. ಜನರ ಮೇಲೆ ನಿರಂತರ ತೆರಿಗೆ ಏರಿಕೆ ?"ಸಾಯಿ ಲೇಔಟ್ ಎಷ್ಟು ಬಾರಿ ಜಲಾವೃತವಾಗಿದೆ? ಡಿಸಿಎಂ ಎಷ್ಟು ಬಾರಿ ಆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ?" ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಾಧನೆ ಬೆಂಗಳೂರು ರಸ್ತೆ, ಚರಂಡಿಗಳಲ್ಲಿ ಕೊಚ್ಚೆಯಾಗಿ ಕೊಚ್ಚಿ ಹೋಗುತ್ತಿದೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಸತ್ತ ಸರ್ಕಾರಕ್ಕೆ ಸಾಧನೆ ಸಮಾವೇಶ ಬೇರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿನ ಡಬ್ಬಾ ಹೊಡೆಯುವುದು ಬಿಟ್ಟು, ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಪಕ್ಕಕ್ಕಿಟ್ಟು ಕೆಲಸ ಮಾಡಲಿ.
ಯಾವಾಗಲೂ ಕುಮಾರಸ್ವಾಮಿ ಏನು ಮಾಡಿದ್ದಾರೆ ಅಂತ ಕೇಳ್ತಿರಲ್ಲ “ 2006 ರಲ್ಲಿ ನನ್ನ ಆಡಳಿತ 20 ತಿಂಗಳು ಮಾತ್ರ, ಆದರೆ ಆ ಅವಧಿಯಲ್ಲಿ 58 ರಸ್ತೆ ವಿಭಜನಾ ಯೋಜನೆಗಳು, ನಮ್ಮ ಮೆಟ್ರೋ ಹಂತ 1 ಪ್ರಾರಂಭ, ಏರ್‌ಪೋರ್ಟ್ ರಸ್ತೆ, ನೆಲಮಂಗಲ ರಸ್ತೆ ಅಭಿವೃದ್ಧಿ—ಈ ಎಲ್ಲವನ್ನೂ ನಾನು ಆರಂಭಿಸಿದ್ದೆ. ನನ್ನ ಕೆಲಸ ದಾಖಲೆಗಳಲ್ಲಿ ಇದೆ. ಓದಿ ನೋಡಿ,” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
"ಇನ್ನಾದರೂ ಮಾತು ನಿಲ್ಲಿಸಿ ಕೆಲಸವನ್ನಾಡಿ. ಇಲ್ಲವಾದರೆ ಈ ಬ್ರಾಂಡ್ ಅನ್ನು ಜನತೆ ನೀರಿನಲ್ಲೇ ಮುಳುಗಿಸುತ್ತಾರೆ!" ಎಂದು ಹೆಚ್ ಡಿಕೆ ಎಚ್ಚರಿಸಿದ್ದಾರೆ.