ಚಿಕ್ಕನಾಯಕನಹಳ್ಳಿ:
ಕೆಲವು ಪ್ರಭಾವಿಗಳು ಬೇರೆಯವರ ಖಾಸಗಿ ಜಮೀನನ್ನ ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿರೋ ಬಗ್ಗೆ ಕೇಳಿದ್ದೀವಿ. ಮತ್ತೆ ಕೆಲವರು ಗೋಮಾಳದಂತಹ ಸರ್ಕಾರಿ ಜಮೀನುಗಳನ್ನ ಒತ್ತುವರಿ ಮಾಡಿಕೊಂಡು ರಾಜನಂತೆ ಪೋಸು ಕೊಡೋರನ್ನ ಕೂಡ ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಪ್ರಭಾವಿ ವ್ಯಕ್ತಿ ಸರ್ಕಾರಿ ಸ್ಮಶಾನವನ್ನೇ ಒತ್ತುವರಿ ಮಾಡಿಕೊಂಡಿರೋ ಬಗ್ಗೆ ಆರೋಪ ಕೇಳಿಬಂದಿದೆ.
ಹೌದು ತಾನು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ. ಹಾಲಿ ಸೊಸೈಟಿ ಸದಸ್ಯ. ತನಗೆ ಎಂಎಲ್ಎ ಗೊತ್ತು, ಎಂಪಿ ಗೊತ್ತು. ಯಾರೇ ಬಂದ್ರೂ ನನ್ನನ್ನ ಏನೂ ಮಾಡಿಕೊಳ್ಳೋಕಾಗಲ್ಲ ಅನ್ನೋ ದುರಂಕಾರದಿಂದ ಇಲ್ಲೊಬ್ಬ ಆಸಾಮಿ ಸರ್ಕಾರಿ ಸ್ಮಶಾನದ ಜಾಗವನ್ನೇ ಒತ್ತುವರಿ ಮಾಡಿಕೊಂಡುಬಿಟ್ಟಿದ್ದಾನಂತೆ. ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಹೋಬಳಿಯ ದೊಡ್ಡರಾಂಪುರ ಗ್ರಾಮದಲ್ಲಿ.
ದೊಡ್ಡರಾಂಪುರ ಸರ್ವೇ ನಂಬರ್ ೮೬ರಲ್ಲಿ ೭ ಗುಂಟೆ ಸರ್ಕಾರಿ ಸ್ಮಶಾನದ ಜಾಗವಿದೆಯಂತೆ. ದಶಕಗಳಿಂದಲೂ ಈ ಜಮೀನು ರೆಕಾರ್ಡ್ನಲ್ಲಿ ಸ್ಮಶಾನ ಅಂತಲೇ ಇದೆಯಂತೆ. ಜಮೀನಿನ ಪಹಣಿಯ ಕಾಲಂ ೯ ಮತ್ತು ೧೨(೨) ಕಾಲಂಗಳಲ್ಲಿ ಸ್ಮಶಾನ ಅಂತಲೇ ಬರೆಯಲಾಗಿದೆ. ಆದ್ರೆ ಈ ಸರ್ಕಾರಿ ಸ್ಮಶಾನದ ಜಾಗವನ್ನ ಇದೇ ಗ್ರಾಮದ ಪ್ರಸನ್ನ ಕುಮಾರ್ ಬಿನ್ ಕ್ಯಾತಯ್ಯ ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರಂತೆ. ಒತ್ತುವರಿ ಮಾಡಿಕೊಂಡು ಈ ಜಾಗದಲ್ಲಿ ತೋಟವನ್ನ ಕೂಡ ಹಾಕಿದ್ದಾರಂತೆ. ಯಾರಾದ್ರೂ ಕೇಳೋಕೆ ಹೋದ್ರೆ ಅವರಿಗೆ ಹೆದರಿಸಿ ಕಳುಹಿಸುವ ಕೆಲಸ ಮಾಡ್ತಿದ್ದಾರಂತೆ. ನನಗೆ ಅವ್ರು ಗೊತ್ತು, ಇವ್ರು ಗೊತ್ತು. ಯಾರೇ ಬಂದ್ರೂ ನನ್ನನ್ನ ಏನೂ ಮಾಡ್ಕೊಳ್ಳೋಕಾಗಲ್ಲ ಅಂತಾ ಚಾಲೆಂಜ್ ಮಾಡ್ತಿದ್ದಾನಂತೆ.
ಇನ್ನು ಒತ್ತುವರಿಯಾಗಿರುವ ಈ ಸರ್ಕಾರಿ ಸ್ಮಶಾನದ ಜಾಗವನ್ನ ತೆರವು ಮಾಡಿಸಿ, ಅದನ್ನ ಗ್ರಾಮಸ್ಥರ ಬಳಕೆಗೆ ಮುಕ್ತ ಮಾಡಿಸಿಕೊಡಿ ಅಂತಾ ತೀರ್ಥಪುರ ಗ್ರಾಮ ಪಂಚಾಯ್ತಿಯಿಂದ ಹಿಡಿದು ತುಮಕೂರು ಜಿಲ್ಲಾಧಿಕಾರಿಯವರೆಗೂ ದೂರನ್ನ ನೀಡಲಾಗಿದೆಯಂತೆ. ಆದ್ರೆ ಸರ್ಕಾರಿ ಜಾಗವನ್ನ ಉಳಿಸಿಕೊಳ್ಳೋಕೆ ಯಾವೊಬ್ಬ ಅಧಿಕಾರಿಗಳಿಗೂ ಮನಸ್ಸೇ ಇದ್ದಂತಿಲ್ಲ. ಹೀಗಾಗಿ ಈವರೆಗೂ ಬಗ್ಗೆ ಒಬ್ಬ ಅಧಿಕಾರಿ ಕೂಡ ಗಮನವನ್ನೇ ಹರಿಸಿಲ್ವಂತೆ.
ಅದೇನೆ ಇರಲಿ…ಗ್ರಾಮಸ್ಥರ ಬಳಕೆಗೆ ಮೀಸಲಾಗಬೇಕಿದ್ದ ಸ್ಮಶಾನದ ಜಾಗವನ್ನ ಹೀಗೆ ಖಾಸಗಿ ವ್ಯಕ್ತಿಯೊಬ್ಬ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಇನ್ನು ಮೇಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸ್ಮಶಾನದ ಜಾಗ ಒತ್ತುವರಿಯಾಗಿದ್ದಿದ್ರೆ ಅದನ್ನ ತೆರವುಗೊಳಿಸಿಕೊಡಬೇಕಿದೆ.