ಬೇರೆಯವರ ಜಮೀನಿಗೆ ಅಕ್ರಮವಾಗಿ ಜೆಸಿಬಿಯನ್ನ ನುಗ್ಗಿಸಿ ತೋಟವನ್ನ ಅಗೆಯಲು ಮುಂದಾಗಿದ್ದಲ್ಲದೇ, ಇದನ್ನ ಪ್ರಶ್ನಿಸಲು ಹೋದವರ ಮೇಲೆಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಮತ್ತು ಲಕ್ಕವ್ವ ದಂಪತಿ ಹಲ್ಲೆಗೊಳಗಾದವರು. ಮೂಲತಃ ನೆಲಮಂಗಲದವರಾಗಿರೋ ಇವರು ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರು ೨೦೨೪ರಂದು ಹೆತ್ತೇನಹಳ್ಳಿಯ ಸರ್ವೇ ನಂ.೧೦೬/೧, ೧೦೮/೧ರಲ್ಲಿ ೩೦ ಗುಂಟೆ ಜಮೀನನ್ನ ಕಲಾವತಿ ಕೋಂ ಲೇ.ಮರಿಯಪ್ಪ ಅವರಿಂದ ಖರೀದಿ ಮಾಡಿದ್ದರು. ಪಹಣಿ, ಕಂದಾಯ ಎಲ್ಲಾ ಇವರ ಹೆಸರಿಗೆ ಆಗಿದೆ. ಆದ್ರೆ ಪಕ್ಕದ ಜಮೀನಿನ ಬಸವರಾಜು ಕುಟುಂಬಸ್ಥರು ಬೇಕು ಅಂತಲೇ ಪದೇಪದೇ ಕಿರಿಕ್ ತೆಗೆದು, ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಿದ್ದಾರಂತೆ. ಈ ಬಸವರಾಜು ಅನ್ನೋರು ಕಲಾವತಿಯವರ ಗಂಡನ ಸಹೋದರನಂತೆ. ಬಸವರಾಜು, ಮಗ ಚೇತನ್ ಮತ್ತು ಪತ್ನಿ ಪುಟ್ಟಲಕ್ಷ್ಮಮ್ಮ ಸೇರಿ ಮಂಜುನಾಥ್ ದಂಪತಿಯ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರಂತೆ. ಇನ್ನು ಈ ಚೇತನ್ ಎಂಬಾತ ಇನ್ನೂ ಅಪ್ರಾಪ್ತನಾಗಿದ್ದು, ಆತ ಕಾಲು ಕೆರೆದುಕೊಂಡು ಜಗಳ ಮಾಡುತ್ತಿರುವ ವಿಡಿಯೋ ಕೂಡ ಲಭ್ಯವಾಗಿದೆ. ನನಗಿನ್ನೂ ೧೮ ವರ್ಷ ಆಗಿಲ್ಲ. ಹೆಚ್ಚು ಅಂದ್ರೆ ಆರು ತಿಂಗಳು ಒಳಗಿದ್ದು ಬರ್ತೀನಿ. ಏನ್ ಮಾಡ್ಕೊಳ್ಳೋಕಾಗುತ್ತೆ ನನ್ನ ನಿಮಗೆ ಅಂತಾ ಧಮ್ಕಿ ಹಾಕ್ತಿದ್ದಾನಂತೆ.
ಇನ್ನು ಇತ್ತೀಚೆಗೆ ಈ ಬಸವರಾಜು ಮಗ ಚೇತನ್ ಎಂಬಾತ ಈ ಮಂಜುನಾಥ್ ಅವರ ಜಮೀನಿಗೆ ಜೆಸಿಬಿಯನ್ನ ನುಗ್ಗಿಸಿ ತೋಟವನ್ನ ಅಗೆಸಲು ಮುಂದಾಗಿದ್ನಂತೆ. ಅಷ್ಟೇ ಹೊತ್ತಿಗೆ ಮಂಜುನಾಥ್ ಮತ್ತು ಮೂರ್ನಾಲ್ಕು ಜನರು ತೋಟಕ್ಕೆ ಹೋಗಿದ್ದಾರೆ. ಈ ಚೇತನ್ ಜೆಸಿಬಿಯನ್ನ ತೆಗೆದುಕೊಂಡು ಬಂದು ತೋಟವನ್ನ ಅಗಿಸುತ್ತಿರೋದನ್ನ ಕಂಡು, ನನ್ನ ಜಮೀನನ್ನ ಯಾಕೆ ಹಾಳು ಮಾಡ್ತಿದ್ದೀಯ ಅಂತಾ ಮಂಜುನಾಥ್ ಕೇಳಿದ್ದಾರೆ. ಆಗ ಈ ಚೇತನ್ ಎಂಬಾತ ಏಕಾಏಕಿ ಬಂದವನೇ ಮಂಜುನಾಥ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನಂತೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಇನ್ನೋಮದು ಸಲ ಜಮೀನಿನ ಬಳಿ ಬಂದರೆ ನಿನ್ನನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನಂತೆ.
ಗಂಡನ ಮೇಲೆ ಹಲ್ಲೆ ನಡೆಸುತ್ತಿರೋದನ್ನ ತಪ್ಪಿಸಲು ಮುಂದಾದಾಗ ಲಕ್ಕವ್ವ ಅವರ ಮೇಲೆ ಬಸವರಾಜು ಹಲ್ಲೆ ನಡೆಸಿದ್ದಾರಂತೆ. ನೀವು ನಮ್ಮ ಜಮೀನಿನಿ ಬಳಿ ಯಾಕೆ ಬರ್ತೀರಿ. ನೀನು ಬದುಕಿದ್ರೆ ತಾನೇ ಇನ್ಮೇಲೆ ಬರೋದು..ಹಾಗೆ ಹೀಗೆ ಅಂತಾ ಹಲ್ಲೆ ಮಾಡಿದ್ದಾರಂತೆ. ಮಹಿಳೆ ಅನ್ನೋದನ್ನ ಕೂಡ ನೋಡದೇ ಅಪ್ಪ ಬಸವರಾಜು ಮತ್ತೆ ಮಗ ಚೇತನ್ ಇವರ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಾರಂತೆ.
ಗಲಾಟೆಯಲ್ಲಿ ಮಂಜುನಾಥ್ ಮತ್ತು ಲಕ್ಕವ್ವ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನ ಕೂಡ ಪಡೆದಿದ್ದಾರೆ. ಇನ್ನು ಈ ಘಟನೆ ಸಂಬಂಧ ಅಪ್ಪ ಬಸವರಾಜು ಮತ್ತು ಮಗ ಚೇತನ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಹಿಂದೆಯೂ ಇವರ ವಿರುದ್ಧ ಒಂದು ಬಾರಿ ಎಫ್‌ಐಆರ್ ದಾಖಲಾಗಿತ್ತು. ಆದ್ರೆ ಆಗಲೂ ಇವ್ರು ರಾಜಕೀಯ ಪ್ರಭಾವವನ್ನ ಬಳಸಿ ಸೇಫ್ ಆಗಿದ್ರಂತೆ. ಇದೀಗ ಮತ್ತೊಮ್ಮೆ ಇವರ ವಿರುದ್ಧ ಎಫ್‌ಐಆರ್ ಆಗಿದ್ದು, ಇವರ ವಿರುದ್ಧ ಏನು ಕ್ರಮ ಜರುಗಿಸ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ.