TUMAKURU: ತುಮಕೂರಿನಲ್ಲಿ ಮತ್ತೆ ಚಾಕು, ಚೂರಿ ಸದ್ದು... ಮನೆ ಎದುರೇ ಯುವಕನಿಗೆ ಚಾಕು ಇರಿದ ಪುಂಡರು

ತುಮಕೂರು: 

ತುಮಕೂರಿನಲ್ಲಿ ಪುಂಡ ಪೋಕರಿಗಳ ಅಟ್ಟಹಾಸ ಸ್ವಲ್ಪ ಕಡಿಮೆಯಾಯ್ತು, ಎಜುಕೇಷನ್‌ ಸಿಟಿಯಲ್ಲಿ ಕ್ರೈಂ ರೇಟ್‌ ಇಳಿಕೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಆತನ ಮನೆಯ ಎದುರೇ, ಆತನ ಕುಟುಂಬಸ್ಥರ ಎದುರೇ ಪುಂಡರು ಚಾಕು ಇರಿದಿರುವ ಘಟನೆ ನಡೆದಿದೆ.

ಹೌದು.. ತಡರಾತ್ರಿ ತುಮಕೂರು ನಗರದ ಕೋತಿತೋಪಿನಲ್ಲಿ ನಡೆದಿರುವ ಘಟನೆಯಿದು. ಕೋತಿತೋಪಿನ ಒಂದನೇ ಕ್ರಾಸ್‌ ನಿವಾಸಿ ಸಯ್ಯದ್‌ ಮೊಯಿನ್‌ ಚಾಕು ಇರಿತಕ್ಕೊಳಗಾಗಿರುವ ಯುವಕ.

ಶಿರಾ ಗೇಟ್‌ನ ಖಾಸಗಿ ಹೋಟೆಲ್‌ ನಲ್ಲಿ ಕೆಲಸ ಮಾಡ್ತಿದ್ದ ಮೊಯಿನ್‌, ಮೊನ್ನೆ ರಾತ್ರಿ ಹೋಟೆಲ್‌ ಕೆಲಸ ಮುಗಿಸಿಕೊಂಡು ಮನೆಯ ಬಳಿ ಹೋಗಿದ್ದಾನೆ. ಈ ವೇಳೆ ಮನೆಯ ಮುಂಭಾಗ ಮೊಯಿನ್‌ ತಮ್ಮ ರಿಜ್ವಾನ್‌ ಹಾಗೂ ಆತನ ಸ್ನೇಹಿತರಾದ ಸುಹಾಸ, ಅಭಿಲಾಷ, ಶಶಿ, ಮನು ಮತ್ತು ಪ್ರಶಾಂತ ಎಂಬುವವರು ಮಾತನಾಡಿಕೊಂಡು ನಿಂತಿಂದ್ರಂತೆ. ಅವರಲ್ಲಿ ಸುಹಾಸ ಎಂಬಾತ ರಿಜ್ವಾನ್‌ ಶರ್ಟ್‌ನ ಕಾಲರ್‌ ಹಿಡಿದು ಹೊಡೆಯುತ್ತಿದ್ದನಂತೆ. ಈ ವೇಳೆ ಅವರ ತಾಯಿ ಸಯಿದಾಬಾನು ತನ್ನ ಮಗನಿಗೆ ಯಾಕೆ ಹೊಡೆಯುತ್ತಿದ್ದಿಯಾ ಅಂತಾ ಸುಹಾಸನಿಗೆ ಒಂದು ಏಟು ಹೊಡೆದಿದ್ದಾರೆ. ಆಗ ಸುಹಾಸ ಸಯಿದಾಬಾನುರವರನ್ನ ತಳ್ಳಿಕೊಂಡು ಹೊಡೆಯಲು ಹೋಗಿದ್ದಾನಂತೆ. ಆಗ ಮೊಯಿನ್‌ ತಾಯಿಯನ್ನ ಬಿಡಿಸಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದಂತಹ ಅಭಿಲಾಷ, ಮನು ಮತ್ತು ಪ್ರಶಾಂತ ಎಂಬುವವರು ಹಲ್ಲೆ ಮಾಡಿದ್ದಾರಂತೆ. ನಂತರ ಅಭಿಲಾಷ ಎಂಬಾತ ತನ್ನ ಬಳಿಯಿದ್ದ ಚಾಕುವಿನಿಂದ ಮೊಯಿನ್‌ ಬೆನ್ನಿಗೆ ಬಲವಾಗಿ ಚುಚ್ಚಿದ್ದಾನಂತೆ. ನಂತರ ಅದೇ ಚಾಕುವಿನಿಂದ ತಲೆಗೂ ಹೊಡೆದಿದ್ದಾನಂತೆ. ಮೊದಲೇ ರಂಜಾನ್‌ ಉಪವಾಸದಲ್ಲಿದ್ದ ಮೋಯಿನ್‌ ಚಾಕುವಿನಿಂದ ಇರಿಯುತ್ತಿದ್ದಂತೆ ಸುಸ್ತಾಗಿ ಕುಸಿದು ಬಿದ್ದಿದ್ದಾನಂತೆ.

ನಂತರ ಮದನ್‌ ಎಂಬುವವರು ಈ ಗಲಾಟೆಯನ್ನ ನೋಡಿ ಬಿಡಿಸಿದ್ದಾರಂತೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮುಬಾರಕ್‌ ಎಂಬಾತ ಗಾಯಗೊಂಡಿದ್ದ ಮೋಯಿನ್‌ನನ್ನ ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೋಯಿನ್‌ಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಇಪಿಎಸ್‌ ಪೊಲೀಸ್‌ ಠಾಣೆಯ ಪೊಲೀಸರು, ಆರೋಪಿಗಳಾದ ಅಬಿಲಾಷ, ಸುಹಾಸ, ಶಶಿ, ಮನು ಮತ್ತು ಪ್ರಶಾಂತ್ ರನ್ನ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 189(2), 191(1), 191(3), 109, 115(2), 352 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Author:

...
Sub Editor

ManyaSoft Admin

Ads in Post
share
No Reviews