Gold Rate :
ಬಂಗಾರ ಪ್ರಾಚೀನ ಕಾಲದಿಂದಲೂ ಮೌಲ್ಯಯುತವಾದ ವಸ್ತುವಾಗಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಅಂತ ಬಾಯಿ ತುಂಬಾ ಹೇಳುವುದಕ್ಕೂ ಭಯ ಪಡುವ ಕಾಲ ಬಂದಿದೆ. ಐದಾರು ಸಾವಿರ ರೂ ಸಿಗುತ್ತಿದ್ದ ಗ್ರಾಂ ಚಿನ್ನ, ಇದೀಗ 10 ಸಾವಿರ ರೂ ಸಮೀಪಿಸಿದೆ. ಅಕ್ಷಯ ತೃತೀಯ ದಿನದಂದು ಬಂಗಾರ ಖರೀದಿ ಮಾಡುತ್ತಿದ್ದ, ಜನರು ಈಗ ಬಂಗಾರ ಖರೀದಿಸಲು ಆತಂಕ ಪಡ್ತಾ ಇದಾರೆ.
ಬಂಗಾರ ಬೆಲೆಯಲ್ಲಿ ಮೊದಲ ಬಾರಿಗೆ ಸರ್ವಕಾಲಿಕ ದಾಖಲೆ ಕಂಡಿದೆ. ಒಂದು ಗ್ರಾಂ ಚಿನ್ನ 10 ಸಾವಿರ ರೂ. ಸಮೀಪ ಬಂದಿದೆ. 10 ಗ್ರಾಂ ಬಂಗಾರ ಖರೀದಿಗೆ ಒಂದು ಲಕ್ಷ 3 ಸಾವಿರ ರೂ ಕೊಡುವ ಸ್ಥಿತಿ ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳ ಆಗ್ತಾನೇ ಸಾಗ್ತಿದೆ. ಅಮೆರಿಕಾದ ಟ್ರಂಪ್ ಪ್ರತಿಸುಂಕ ಜಾರಿಮಾಡುವ ಘೋಷಣೆ ಮಾಡಿದ ಬಳಿಕ ಏಪ್ರಿಲ್ 4 ರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಲೋಲ ಕಲ್ಲೋಲ ಆಗಿದೆ.
ಅಕ್ಷಯ ತೃತೀಯದಂದು ಬಂಗಾರ ಖರೀದಿಸುತ್ತಿದ್ದ ಜನ ಭಯ ಪಡುವಂತಾಗಿದೆ. ಹೀಗಿರುವಾಗಲೇ ಚಿನ್ನದ ವ್ಯಾಪಾರಿಗಳು ಅದಕ್ಕಾಗಿ ಬೊಂಬಾಟ್ ಐಡಿಯಾ ಕಂಡು ಹಿಡಿದಿದ್ದಾರೆ. ಮಾರುಕಟ್ಟೆಗೆ ಅರ್ಧ ಗ್ರಾಂ ಚಿನ್ನದ ನಾಣ್ಯ ಲಗ್ಗೆ ಇಟ್ಟಿದೆ. ಅಕ್ಷಯ ತೃತೀಯಕ್ಕೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್ 30ರಂದು ಅಕ್ಷಯ ತೃತೀಯ ಇದ್ದು, ಗ್ರಾಹಕರು ಆತಂಕದಲ್ಲಿದ್ದಾರೆ. ಚಿನ್ನದ ಬೆಲೆ ಇಷ್ಟಾದರೆ ಏನು ಖರೀದಿ ಮಾಡೋದು ಅಂತ ಕಂಗಲಾಗಿದ್ದಾರೆ. ಆದರೆ ಗ್ರಾಹಕರ ಮನಸ್ಥಿತಿ ಅರ್ಥೈಸಿಕೊಂಡಿರುವ ಚಿನ್ನದ ಅಂಗಡಿ ಮಾಲೀಕರು, ಇದೇ ಮೊದಲ ಬಾರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯ ಬಿಡುಗಡೆಗೊಳಿಸಿದ್ದಾರೆ. ಅಕ್ಷಯ ತೃತೀಯದ ದಿನ ಕನಿಷ್ಠ ಅರ್ಧ ಗ್ರಾಂ ಚಿನ್ನ ಖರೀದಿಸಲಿ ಎಂದು ಈ ಐಡಿಯಾ ಮಾಡಲಾಗಿದ್ದು, ಇದರಿಂದ ಗ್ರಾಹಕರು ಖುಷಿಗೊಂಡಿದ್ದಾರೆ.
ಒಟ್ಟಿನಲ್ಲಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವ ಸಂಪ್ರದಾಯ ಇದೆ. ಈ ದಿನ ಚಿನ್ನ ಖರೀದಿಸಿದರೆ ಐಶ್ವರ್ಯ ಹೆಚ್ಚುತ್ತದೆ. ಎಂಬ ನಂಬಿಕೆ ಇದೆ. ಆದರೆ ಬಂಗಾರದ ಬೆಲೆ ಗಗನಮುಖಿಯಾಗಿದ್ದು, ಇದೀಗ ಒಂದು ಗ್ರಾಂ ಕೊಳ್ಳುತ್ತಿದ್ದ ಜನ, ಅರ್ಧ ಗ್ರಾಂ ಖರೀದಿಗೆ ಮನಸ್ಸು ಮಾಡ್ತಿರೋದಂತು ಸುಳ್ಳಲ್ಲ.