ಪಾವಗಡ:
ಪಾವಗಡ ತಾಲೂಕಿನ ಕಸಬ ಹೋಬಳಿಯ ಬಾಲಮ್ಮನಹಳ್ಳಿ ಗ್ರಾಮದ ಸರ್ವೇ ನಂಬರ್ 9ನೇ ಪಹಣಿ ತಿದ್ದುಪಡಿಗೆ ರೈತರು ಸುಮಾರು ಮೂರು ವರ್ಷಗಳಿಂದಲೂ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಾಲಮ್ಮನಹಳ್ಳಿ ಗ್ರಾಮದ 9ನೇ ಸರ್ವೇ ನಂಬರ್‌ನಲ್ಲಿ ಅಳತೆ ವ್ಯತ್ಯಾಸ ಇರುವ ಬಗ್ಗೆ ತಾಲೂಕು ಕಚೇರಿಗೆ ದೂರು ನೀಡಲಾಗಿದೆ. ಈ ಕುರಿತು ಭೂ ದಾಖಲೆಗಳ ಉಪನಿರ್ದೇಶಕರು ಪತ್ರವೊಂದನ್ನು ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅದರಂತೆ 2023ರಲ್ಲಿ ತುಮಕೂರು ಭೂ ದಾಖಲೆಗಳ ಕಚೇರಿ 11 ಪಹಣಿ ಪೋಟುಗಳನ್ನು ಒಟ್ಟುಗೂಡಿಸಿ ರದ್ದು ಮಾಡಿ ಪುನರ್ ವಿಂಗಡನೆ ಮಾಡಲು ಪಾವಗಡ ತಾಲ್ಲೂಕು ಭೂ ದಾಖಲೆಗಳ ಕಛೇರಿಗೆ ಸೂಚನೆ ನೀಡಲಾಗಿದೆ.
ಆದರೆ, ಆದೇಶ ನೀಡಿ ಒಂದು ವರ್ಷ 8 ತಿಂಗಳಾದರೂ ಸ್ಥಳ ಪರಿಶೀಲನೆ ನಡೆಸದೆ, ತಿದ್ದುಪಡಿಯ ಅನ್ವಯಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಎಲ್ಲಾ 11 ಪಹಣಿದಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತರು ಆಗ್ರಹಿಸುತ್ತಿದ್ದಾರೆ.