ಮಧುಗಿರಿ :
ಮಧುಗಿರಿ ತಾಲೂಕು ಹೇಳಿ ಕೇಳಿ ಬರಪೀಡಿತ ಪ್ರದೇಶ, ಬಯಲು ಸೀಮೆ. ಈ ಪ್ರದೇಶದಲ್ಲಿ ಮಳೆ ಬಂದರೆ ಅಷ್ಟೇ ಬೆಳೆ ಬೆಳೆಯಲು ಸಾಧ್ಯ. ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಮಾಡುವುದು ಅಂದರೆ ದೊಡ್ಡ ಸಾವಲಿನ ಕೆಲಸ. ಇಂತಹ ಬರಡು ಭೂಮಿಯಲ್ಲಿ ಹೊಸ ಭರವಸೆ ಕೊಟ್ಟಿದ್ದಾರೆ ರೈತ ನಾರಾಯಣಗೌಡ. ಹೌದು ಈ ರೈತ ಬಂಗಾರದಂತಹ ಡ್ರ್ಯಾಗನ್ ಫ್ರೂಟ್ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತ ಕೆ.ಎನ್. ನಾರಾಯಣಗೌಡ ಬರದ ನಾಡಲ್ಲಿ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದು ಸುತ್ತಮುತ್ತಲ ರೈತರು, ಅಧಿಕಾರಿಗಳ ಹುಬ್ಬೇರುವಂತೆ ಮಾಡಿದ್ದಾರೆ. ನಾರಾಯಣಗೌಡ ಅವರು ತಮ್ಮ 9.5 ಎಕರೆ ಜಮೀನಿನಲ್ಲಿ ಪರಂಗಿ, ಅಡಿಕೆ, ಬಟರ್ ಪ್ರೂಟ್, ಬಾಳೆಯ ಜೊತೆಗೆ ಎರಡೂವರೆ -ಎಕರೆ ಪ್ರದೇಶದಲ್ಲಿ ಡ್ರಾಗನ್ ಪ್ರೂಟ್ ಬೆಳೆದಿದ್ದಾರೆ. ತೋಟಗಾರಿಕೆ, ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆ-ಸೂಚನೆ ಪಡೆಯುವುದರ ಜೊತೆಗೆ -ನರೇಗಾದ ಸವಲತ್ತುಗಳ ಮಾಹಿತಿ ಪಡೆದು ಆನಂತರ ತಮ್ಮ ಜಮೀನಿನಲ್ಲಿ ಡ್ರಾಗನ್ ಪ್ರೂಟ್ ಪ್ರಯೋಗ ಮಾಡಿದ್ದಾರೆ.
ಬಯಲುಸೀಮೆಯ ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳ ಜೊತೆಗೆ ಹೆಚ್ಚು ಲಾಭ ತರುವ ಬೆಳೆಗಳನ್ನು ಬೆಳೆಯಬೇಕು. ಸರ್ಕಾರ ರೈತರ ಹೊಸ ಹೊಸ ಬೆಳೆಗಳಿಗೆ ಅಗತ್ಯ ನೆರವು ಮತ್ತು ಸೂಕ್ತ ಮಾರು ಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಆಸಕ್ತಿ ಹೆಚ್ಚುತ್ತದೆ ಎಂದು ರೈತ ನಾರಾಯಣಗೌಡ ತಿಳಿಸಿದರು.