ಪಾವಗಡ:
ಬರ ಪೀಡಿತ ತಾಲೂಕು ಅಂತಾ ಕರೆಸಿಕೊಳ್ಳುವ ಪಾವಗಡದಲ್ಲಿ ನೀರಿನ ಸಮಸ್ಯೆ ಬಿಗುಡಾಯಿಸ್ತಾ ಇದೆ. ಬೋರ್ವೆಲ್ನಲ್ಲಿ ನೀರು ಸಿಕ್ಕರೂ ಮೋಟಾರ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. ಪಾವಗಡ ಪಟ್ಟಣದ ರೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಸರ್ವೇ ನಂಬರ್ 305ರಲ್ಲಿ ರುದ್ರಭೂಮಿ ಜಾಗದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಶಾಸಕರಾಗಿದ್ದಂತ ವೇಳೆ ಬೋರ್ವೆಲ್ನನ್ನು ಕೊರೆಸಲಾಗಿತ್ತು. ಅದೃಷ್ಟವಶಾತ್ ನೀರು ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೋಟಾರ್ ಅಳವಡಿಸದಿರೋದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಶವ ಸಂಸ್ಕಾರಕ್ಕೆ ಬಂದ ಜನರಿಗೆ ಕೈ-ಕಾಲು ತೊಳೆಯಲು ಮತ್ತು ಈ ಭಾಗದ ಜಾನುವಾರುಗಳಿಗೆ ನೀರು ಕೂಡ ಸಿಗದೇ ಕಷ್ಟ ಪಡುವಂತಾಗಿದೆ.
ಇನ್ನು ವಿಪರ್ಯಾಸ ಅಂದರೆ ಗ್ರಾಮ ಪಂಚಾಯ್ತಿಯಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು 5 ಲಕ್ಷ ಹಣ ಎಸ್ಟಿಮೇಟ್ ಮಾಡಿ ಸಭೆಯಲ್ಲಿ ತೀರ್ಮಾನಿಸಿ ಹಣ ಇಟ್ಟಿದ್ರು. ಆದರೆ ಯಾರು ಕಾಮಗಾರಿ ಮಾಡಿಸಬೇಕೆಂಬ ಪೈಪೋಟಿಗೆ ಬಿದ್ದಿದ್ದು, ಪಂಚಾಯ್ತಿಯಲ್ಲೇ ಹಣ ಕೊಳೆಯುತ್ತಿದ್ದು, ಕೊಳೆವೆ ಬಾವಿಗಳು ಅನಾಥವಾಗಿವೆ. ಬೋರ್ವೆಲ್ನಲ್ಲಿ 2 ಇಂಜಿನಷ್ಟು ನೀರು ಸಿಕ್ಕಿದ್ದರೂ ಕೂಡ ಬೋರ್ವೆಲ್ ಅಳವಡಿಸದೇ ಇರೋದರಿಂದ ಶವ ಸಂಸ್ಕಾರಕ್ಕೆ ಬರುವ ಜನರು ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋರ್ವೆಲ್ಗೆ ಮೋಟಾರ್ ಇಳಿಸಿ ನೀರು ಕೊಡುವ ಕೆಲಸ ಮಾಡಬೇಕಿದೆ. ಬೇಸಿಗೆ ಸಮೀಪಿಸುತ್ತಿದ್ದು ನೀರಿನ ಸಮಸ್ಯೆಯಿಂದ ಜನರಿಗೆ ಮುಕ್ತಿ ಕೊಡಿಸಬೇಕಿದೆ.