ಗುಬ್ಬಿ : ರೈತರನ್ನು ವಂಚಿಸಲು ಹೊಸ ದಾರಿ ಕಂಡುಕೊಂಡ್ರಾ ವಂಚಕರು?

ಗುಬ್ಬಿ ತಹಶೀಲ್ದಾರ್‌ ಆರತಿ
ಗುಬ್ಬಿ ತಹಶೀಲ್ದಾರ್‌ ಆರತಿ
ತುಮಕೂರು

ಗುಬ್ಬಿ:

ನೂರಾರು ಎಕರೆ ಸರ್ಕಾರಿ ಗೋಮಾಳದ ಭೂಮಿಯನ್ನು ೧೩೭ ಮಂದಿ ಪ್ರಭಾವಿಗಳಿಗೆ ಪರಭಾರೆ ನಡೆಸಲು ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿದ್ದ ಗುಬ್ಬಿಯಲ್ಲಿಯೇ ಇದೀಗ ಮತ್ತೊಂದು ದಂಧೆ ಬಯಲಿಗೆ ಬಂದಿದೆ. ಗುಬ್ಬಿ ತಹಶೀಲ್ದಾರ್‌ ಅವರಿಂದಲೇ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದ್ದು, ರೈತರನ್ನು ವಂಚಿಸಲು ವಂಚಕರು ಹೊಸ ದಾರಿಯನ್ನ ಕಂಡುಕೊಂಡರಾ ಎಂಬ ಅನುಮಾನಗಳು ಮೂಡೋದಕ್ಕೆ ಶುರುವಾಗಿದೆ.

ಏನೂ ಗೊತ್ತಿಲ್ಲದ ರೈತರಿಂದ ಭೂಮಿ ಮಂಜೂರಿಗೆ ಅರ್ಜಿ ಹಾಕಿಸಿ ಅವರಿಂದ ತಲಾ ಒಂದು ಸಾವಿರ ರೂಪಾಯಿ ಪೀಕುತ್ತಿರುವ ದಂಧೆ ಗುಬ್ಬಿಯಲ್ಲಿ ಬೆಳಕಿಗೆ ಬಂದಿದೆ. ಗುಬ್ಬಿ ತಹಶೀಲ್ದಾರ್ ಅವರಿಂದಲೇ ಈ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸಾಗುವಳಿ ಭೂಮಿ ನೀಡುವಂತೆ ಮಧ್ಯವರ್ತಿಗಳಿಂದ ತಹಶೀಲ್ದಾರ್ ಗೆ ಬರೋಬ್ಬರಿ ಐದು ಸಾವಿರ ಅರ್ಜಿಗಳು ಬಂದಿವೆಯಂತೆ. ಒಂದು ಅರ್ಜಿಗೆ ಒಂದು ಸಾವಿರ ರೂಪಾಯಿಯನ್ನು ಪಡೆದು ಮಧ್ಯವರ್ತಿಗಳು ಮುಗ್ಧ ರೈತರನ್ನು ವಂಚಿಸಲು ಮುಂದಾಗಿದ್ದಾರಂತೆ.

ಸರ್ಕಾರಿ ಭೂಮಿಯಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯನ್ನು ಹುಡುಕಿ ಭೂ ರಹಿತರಾದ ನಮಗೆ ಮುಖ್ಯಮಂತ್ರಿಗಳಾದ ತಾವು ಭೂಮಿಯನ್ನು ಮಂಜೂರು ಮಾಡಿಸಿಕೊಡಿ ಎಂದು ನೂರಾರು ಮಂದಿ ರೈತರ ಹೆಸರಿನಲ್ಲಿ ಒಬ್ಬನೇ ವ್ಯಕ್ತಿ ನೂರಾರು ಅರ್ಜಿಗಳನ್ನು ತೆಗೆದುಕೊಂಡು ಬಂದು  ತಹಶೀಲ್ದಾರ್‌ಗೆ ನೀಡಲು ಬಂದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಇಂದು ಮಧ್ಯಾಹ್ನ ಗುಬ್ಬಿ ತಹಶೀಲ್ದಾರ್‌ ಆರತಿಯವರು ಅನ್ಯ ಕಾರ್ಯ ನಿಮಿತ್ತ ಕಛೇರಿ ಸಿಬ್ಬಂದಿಯೊಂದಿಗೆ ಹೊರಗಡೆ ಹೊರಟಿದ್ದರು. ಈ ವೇಳೆ ತಹಶೀಲ್ದಾರ್ ಕಚೇರಿ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬ ನನ್ನ ಬಳಿಯಿರುವ ಅರ್ಜಿ ಸ್ವೀಕರಿಸಿ ಅವುಗಳನ್ನು ಮುಖ್ಯಮಂತ್ರಿಯವರಿಗೆ ಕಳಿಸಿಕೊಡಿ ಅಂತಾ ಕೇಳಿದ್ದಾನೆ. ಈತನ ಬಳಿ ನೂರಕ್ಕೂ ಹೆಚ್ಚು ಅರ್ಜಿಗಳಿದ್ದು ತಹಶೀಲ್ದಾರ್‌ಗೆ ಕಾಣಿಸಿದೆ. ಆಗ ಇದು ಯಾವ ಅರ್ಜಿ? ಯಾವ ವಿಚಾರಕ್ಕೆ ಸಂಬಂಧಿಸಿದೆ? ತಮ್ಮ ಹೆಸರೇನು ಅಂತೆಲ್ಲಾ ಮಾತು ಮುಂದುವರೆಸಿರುವ ತಹಶೀಲ್ದಾರ್‌, ಇಷ್ಟೊಂದು ಅರ್ಜಿಗಳನ್ನು ನೀವೊಬ್ಬರೇ ಯಾಕೆ ತೆಗೆದುಕೊಂಡು ಬಂದಿದ್ದೀರಿ ಅಂತಾ ಕೇಳಿದ್ದಾರೆ. ಈಗಾಗಲೇ ಅಮಾಯಕ ರೈತರನ್ನು ವಂಚಿಸಲು ಒಂದು ಅರ್ಜಿಗೆ ಒಂದು ಸಾವಿರ ಹಣ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಅದೆಲ್ಲವನ್ನು ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ. ಇಷ್ಟೊಂದು ಅರ್ಜಿಗಳನ್ನು ಒಬ್ಬರೇ ಹೇಗೆ ಕೊಡಲು ಸಾಧ್ಯ? ತಂದಿರುವ ಅರ್ಜಿಗಳಲ್ಲಿ ರೈತರಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇಲ್ಲಿ ಇಲ್ಲ, ಕೇವಲ ಅರ್ಜಿಗಳು ಮಾತ್ರ ಇವೆ. ನಾನು ಈ ಕೂಡಲೇ ದೂರು ನೀಡುತ್ತೇನೆ ಎಂದಾಗ ಅರ್ಜಿ ಸಲ್ಲಿಸಲು ಬಂದಿದ್ದ ಆ ವ್ಯಕ್ತಿ ಮಾತನಾಡಲು ತಡವರಿಸಿ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಈ ಬಗ್ಗೆ ಖುದ್ದು ತಹಶೀಲ್ದಾರ್‌ ಆರತಿಯವರೇ ನಿಮ್ಮ ಪ್ರಜಾಶಕ್ತಿ ಟಿವಿಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೆಳಿಗ್ಗೆಯಷ್ಟೇ ರೈತರ ಗುಂಪೊಂದು ಯಾರೋ ಮಧ್ಯವರ್ತಿಗಳು ತಮ್ಮ ಬಳಿ ಅರ್ಜಿ ಹಾಕಿಸಿಕೊಂಡು ಒಂದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಾದ ಕೆಲ ಹೊತ್ತಿನಲ್ಲಿಯೇ ಒಬ್ಬನೇ ವ್ಯಕ್ತಿ ನೂರಾರು ಅರ್ಜಿಗಳನ್ನು ಹಿಡಿದು ನಮ್ಮ ಕಚೇರಿ ಬಳಿ ಬಂದಿದ್ದ. ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಇಂತಹ ಸಾವಿರಾರು ಅರ್ಜಿಗಳು ಬಂದಿವೆ. ನಿಯಮಾನುಸಾರ ನಮೂನೆ ೫೩, ೫೪ ಮತ್ತು ೫೭ರ ಅಡಿಯಲ್ಲಿ ಅರ್ಜಿ ಸಲ್ಲಿಸಿರೋರಿಗೆ ಮಾತ್ರ ಪರಿಶೀಲನೆ ನಡೆಸಿ ಭೂಮಿ ಮಂಜೂರು ಮಾಡಲಾಗುತ್ತೆ. ಈ ತರಹದ ಯಾವುದೇ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ ರೈತರು ಇಂತಹವರಿಂದ ಬಗ್ಗೆ ಎಚ್ಚರದಿಂದಿರಲು ತಿಳಿಸಿದರು. 

ಗುಬ್ಬಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದ್ದ ಅಕ್ರಮ ಭೂ ಕಬಳಿಕೆ ಪ್ರಕರಣ ಮಾಸುವ ಮುನ್ನವೇ ಇದೀಗ ರೈತರಿಗೆ ಭೂಮಿ ಕೊಡಿಸುವ ಆಸೆ ಹುಟ್ಟಿಸಿ ಒಂದು ಅರ್ಜಿಗೆ ಒಂದು ಸಾವಿರ ಹಣ ಪಡೆದು ರೈತರನ್ನು ವಂಚಿಸಲು ಮುಂದಾಗಿರುವ ಪ್ರಕರಣ ಬೆಳಿಕಿಗೆ ಬಂದಿದೆ. ಆದಷ್ಟು ಬೇಗ ಇಂತಹ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವ ಕೆಲಸ ಆಗ್ಬೇಕಿದೆ

Author:

...
Editor

ManyaSoft Admin

Ads in Post
share
No Reviews