ಶ್ರೀ ಸತ್ಯಸಾಯಿ ಆಸ್ಪತ್ರೆ ಭಾಷೆಟ್ಟಿಹಳ್ಳಿ ,ಬ್ಯಾಂಕ್ ಸರ್ಕಲ್ತುಮಕೂರು
ದೊಡ್ಡಬಳ್ಳಾಪುರ:
ವೈದ್ಯರನ್ನು ದೇವರಂತೆ ಕಾಣೋ ಸಂಸ್ಕೃತಿ ನಮ್ಮದು. ಅದೇ ಕಾರಣದಿಂದಲೇ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಆಗಾಗ ಹೇಳ್ತಲೇ ಇರ್ತೀವಿ. ಆದರೆ ಈ ಮಾತನ್ನು ಹೇಳಿಕೊಂಡು ದೊಡ್ಡಬಳ್ಳಾಪುರದ ಈ ಕ್ಲಿನಿಕ್‌ಗಳಿಗೆ ಹೋದರೆ, ನಿಮ್ಮನ್ನ ಇವರು ಹರಿಯಿದ್ದಲ್ಲಿಗೆ ಕಳಿಸಿಬಿಡೋದು ಗ್ಯಾರೆಂಟಿ.
ಹೌದು.. ದೊಡ್ಡಬಳ್ಳಾಪುರ ನಗರದಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರ್ತಿದೆ. ಆರೋಗ್ಯ ಸರಿಯಿಲ್ಲಾ ಅಂತಾ ಏನಾದರೂ ಇವರ ಬಳಿ ಹೋದ್ರೆ ನಿಮ್ಮ ಕತೆ ಖೇಲ್ ಖತಂ. ದೊಡ್ಡಬಳ್ಳಾಪುರ ನಗರದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರೋ ಬಗ್ಗೆ ನಮ್ಮ ಪ್ರಜಾಶಕ್ತಿಗೆ ಸಾಕಷ್ಟು ದೂರುಗಳು ಬಂದಿದ್ವು.
ನಕಲಿ ವೈದ್ಯರ ಜಾಡನ್ನು ಹಿಡಿದು ಹೊರಟ ನಮಗೆ ಒಂದೊಂದೇ ರೋಚಕ ಮಾಹಿತಿಗಳು ಸಿಗ್ತಾ ಹೋದ್ವು. ಅಧಿಕಾರಿ ವರ್ಗ ಕೂಡ ಇದರಲ್ಲಿ ಶಾಮೀಲಾಗಿದೆ ಅನ್ನೋದು ನಾಚಿಕೆಗೇಡಿನ ಸಂಗತಿ. ಜೊತೆಗೆ ದೊಡ್ಡಬಳ್ಳಾಪುರದ ನಗರದ ಪ್ರತಿಷ್ಠಿತ ಆಸ್ಪತ್ರೆಯ ಕರ್ಮಕಾಂಡ ಕೂಡ ಬಯಲಾಗಿ ಹೋಗಿತ್ತು.
ನಗರದ ಪ್ರತಿಷ್ಠಿತ ಆಸ್ಪತ್ರೆ ಅಂತ ಹೇಳುವ ಶ್ರೀ ಸತ್ಯಸಾಯಿ ಆಸ್ಪತ್ರೆ ಭಾಷೆಟ್ಟಿಹಳ್ಳಿ ಬ್ಯಾಂಕ್ ಸರ್ಕಲ್ ನಲ್ಲಿದೆ. ನೀವು ಚೆನ್ನಾಗಿದ್ದಿರೋ ಇಲ್ವೋ ಬೇರೆ ವಿಚಾರ. ಇಲ್ಲಿಗೆ ಹೋದರೆ ಫಿಟ್ ನೆಸ್ ಸರ್ಟಿಫಿಕೇಟ್ ಮಾತ್ರ ಬಹುಬೇಗನೇ ಸಿಗುತ್ತೆ. ಅದು ಕೇವಲ 100 ರೂಪಾಯಿಗೆ. ಆದರೆ ಇದರಲ್ಲಿ ಇನ್ನೊಂದು ವಿಚಿತ್ರ ವಿಚಾರ ಏನಂದರೆ, ಒಂದೇ ಕೆಎಂಸಿ ನಂಬರ್‌ನಲ್ಲಿ ಬೇರೆ ಬೇರೆ ಡಾಕ್ಟರ್‌ಗಳ ಸಹಿಗಳು. ಕೆಎಂಸಿ ನಂಬರ್ ಇರೋದು ಡಾಕ್ಟರ್ ವಿಶ್ವನಾಥ್ ಅವರ ಹೆಸರಲ್ಲಿ. ಆದರೆ ಇದನ್ನು ಬಳಕೆ ಮಾಡಿಕೊಂಡು ಬೇರೆಬೇರೆ ಡಾಕ್ಟರ್‌ಗಳು ಸಹಿ ಮಾಡಿ ಸರ್ಟಿಫಿಕೇಟ್ ಕೊಡುತ್ತಾರೆ. ನಮ್ಮ ಚುಟುಕು ಕಾರ್ಯಾಚರಣೆಯಲ್ಲಿ ನಮಗೆ ಒಂದೇ ಕೆಎಂಸಿ ನಂಬರ್ ಇರುವ ಮೂರು ಬೇರೆ ಬೇರೆ ರೀತಿಯ ಸಹಿಗಳಿರುವ ಸರ್ಟಿಫಿಕೇಟ್ ಗಳು ಕೂಡ ಸಿಕ್ಕಿವೆ.
ಕಳೆದ ಹತ್ತು ದಿನಗಳ ಮುಂಚೆ ನಮ್ಮ ಪ್ರಜಾಶಕ್ತಿ ತಂಡ ವರದಿ ಮಾಡಲು ಹೋದಾಗ ಇವರ ಯಾವ ಲೈಸನ್ಸ್ ಗಳು ರಿನಿವಲ್ ಆಗಿರ್ಲಿಲ್ಲ. ಆ ಬಳಿಕ ಇದನ್ನು ಇಲ್ಲಿನ THO ಗಮನಕ್ಕೆ ತಂದಾಗ ರಿನಿವಲ್ ಮಾಡಲಾಗಿದೆ. ಇನ್ನು ಈ ಆಸ್ಪತ್ರೆಯಲ್ಲಿ ಹಾಕೊಂಡಿರೋ ಬೋರ್ಡ್ ಗಳಿಗೂ ಡಾಕ್ಟರ್ ಗಳಿಗೂ ಸಂಬಂಧವೇ ಇಲ್ಲ. ಇನ್ನೊಂದು ನಮಗಿರೋ ಮಾಹಿತಿ ಪ್ರಕಾರ ಇಲ್ಲಿ ಯಾರು ಒರಿಜಿನಲ್ ಡಾಕ್ಟರ್‌ಗಳೇ ಇಲ್ವಂತೆ. ಇನ್ನು ಏನಪ್ಪಾ ಈ ಕೆಲಸ ಮಾಡ್ತಾ ಇದ್ದೀಯಲ್ಲ. ಏನಿದು ಸರ್ಟಿಫಿಕೇಟ್ ಕಥೆ ಅಂತ ಕೇಳಿದರೆ, ಇಲ್ಲಿನ ನಕಲಿ ವೈದ್ಯರು ಬೇರೆ ರೀತಿಯಲ್ಲಿ ಕತೆ ಹೇಳುತ್ತಾರೆ.
ಇನ್ನು ಮತ್ತೊಂದು ಭಯಾನಕ ವಿಚಾರ ಏನು ಅಂದರೆ, ಈ ಆಸ್ಪತ್ರೆ ಸೇರಿದಂತೆ ಸುತ್ತಮುತ್ತ ಇರುವ ಕೆಲವು ಕ್ಲಿನಿಕ್‌ಗಳಲ್ಲಿ ಹೆಣ್ಣುಭ್ರೂಣ ಹತ್ಯೆಯಂತಹ ಸಮಾಜಘಾತುಕ ಕೆಲಸ ಕೂಡ ನಡೆಯುತ್ತಿದೆಯಂತೆ. ಈ ಬಗ್ಗೆ ಸಾರ್ವಜನಿಕರೇ ಆರೋಪ ಮಾಡುತ್ತಿದ್ದಾರೆ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡಾಗಿದ್ದಾರೆ.
ಇನ್ನು ಇಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುತ್ತಿರುವ ಇನ್ನೂ ಮೀಸೆಯೇ ಬಾರದ ವಿದ್ಯಾರ್ಥಿಗಳು ಇಲ್ಲಿನ ಕ್ಲಿನಿಕ್‌ಗಳಲ್ಲಿ ಡಾಕ್ಟರ್ಗಳು. ನಗರದ ಬಹುತೇಕ ಮೆಡಿಕಲ್ ಸ್ಟೋರ್ ನವರು ಈ ರೀತಿ ನಕಲಿ ಕ್ಲಿನಿಕ್ ಗಳನ್ನ ನಡೆಸುತ್ತಿದ್ದು, ಈ ರೀತಿ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ರೋಗಿಗಳಿಗೆ ಟ್ರೀಟ್ಮೆಂಟ್ ಕೊಡಿಸ್ತಾ ಇದ್ದಾರೆ. ಇಲ್ಲಿಗೆ ಬರುವ ರೋಗಿಗಳಲ್ಲಿ ಹೆಚ್ಚಿನವರು ಕಾರ್ಖಾನೆಗಳು ಹಾಗೂ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಹೊರರಾಜ್ಯದವರೇ ಆಗಿದ್ದಾರೆ. ಹೀಗೆ ಹೊರರಾಜ್ಯದಿಂದ ಬರುವ ರೋಗಿಗಳೇ ಇವರ ಟಾರ್ಗೆಟ್ ಆಗಿದ್ದಾರೆ. ಈ ಬಗ್ಗೆ ವರದಿ ಮಾಡಲು ನಮ್ಮ ಕ್ಯಾಮೆರಾ ಹೋಗ್ತಿದ್ದಂತೆ ವೈದ್ಯನ ವೇಷದಲ್ಲಿದ್ದ ವಿದ್ಯಾರ್ಥಿ ಎಸ್ಕೇಪ್ ಆಗಿದ್ದಾನೆ.
ನಮ್ಮ ಈ ಆಪರೇಷನ್ ಬಗ್ಗೆ ಅಧಿಕಾರಿ ವರ್ಗದಿಂದ ಮಾಹಿತಿ ಸೋರಿಕೆ ಆಗ್ತಿದ್ದಂತೆ ಖಾಲಿ ಸರ್ಟಿಫಿಕೇಟ್‌ಗಳಿಗೆ ಕೆಎಂಸಿ ನಂಬರ್ ಜೊತೆ ನಕಲಿ ಸಹಿಗಳು ಕೂಡ ಸೃಷ್ಟಿ ಆಗಿವೆ. ಒಟ್ಟಿನಲ್ಲಿ ಲಕ್ಷ ಲಕ್ಷ ಕೊಟ್ಟು ಎಂಬಿಬಿಎಸ್ ಓದುವ ಬದಲು ದೊಡ್ಡಬಳ್ಳಾಪುರಕ್ಕೆ ಬಂದುಬಿಟ್ಟರೆ ಕಾಂಪೌಂಡರ್ ಕೂಡ ಈಸಿಯಾಗಿ ಡಾಕ್ಟರ್ ಆಗಿಬಿಡಬಹುದು. ಇಲ್ಲಿನ ಆಡಳಿತ ಅಷ್ಟು ಚೆನ್ನಾಗಿ ವ್ಯವಸ್ಥೆ ಮಾಡಿಕೊಟ್ಟಬಿಡುತ್ತೆ. ಬೇಲಿನೇ ಎದ್ದು ಹೊಲ ಮೇಯ್ತಾ ಇದ್ದಾಗ ಯಾರ್ ಏನು ಮಾಡಕ್ಕೆ ಆಗುತ್ತೆ ನೀವೇ ಹೇಳಿ.