ದೇವನಹಳ್ಳಿ:
ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರೋ ಪೊಲೀಸರು. ಈ ಎಲ್ಲಾ ದೃಶ್ಯಗಳು ಕಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮದಲ್ಲಿ ಕಂಡು ಬಂದಿದೆ.
ಪೋಲಿಸರನ್ನು ಅಸ್ತ್ರ ಮಾಡಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಮಂಡಿಬೆಲೆಯ ಅರಣ್ಯ ಇಲಾಖೆಯ ಜಮೀನಿನ ಅಂಚಿನಲ್ಲಿರುವ ಜಮೀನಿಗೆ ಏಕಾಏಕಿ ನುಗ್ಗಿಸಿ, ಬೆಳೆಯನ್ನು ತೆರವು ಮಾಡಲು ಮುಂದಾದರು. ಒಂದು ನೋಟಿಸ್ ಕೂಡ ಕೊಡದೇ ಏಕಾಏಕಿ ಬೆಳೆ ನಾಶವನ್ನು ಕಂಡು ರೈತರು ಕಣ್ಣೀರಾಕಿದ್ರು. ಅಲ್ಲದೇ ಯಾವ ಆದೇಶದ ಮೇರೆಗೆ ಒತ್ತುವರಿ ತೆರವು ಕಾರ್ಯ ಮಾಡುತ್ತಿದ್ದೀರಾ ಎಂದು ರೈತರು ಕೇಳಿದರೂ ಯಾವುದಕ್ಕೂ ಉತ್ತರ ಕೊಡದೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಾಲ ಸೋಲ ಮಾಡಿ ರೈತರು ದ್ರಾಕ್ಷಿ , ದಾಳಿಂಬೆ , ಸೀಬೆ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದಿದ್ದರು. ಒತ್ತುವರಿ ತೆರವು ಮಾಡುವುದಾದರೆ ಮುಂಚಿತವಾಗಿ ನೋಟೀಸ್ ನೀಡಿ ರೈತರಿಗೆ ತಿಳಿಸಿ ಒತ್ತುವರಿ ತೆರವು ಮಾಡಬೇಕಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಐದಾರು ಜೆಸಿಬಿಗಳಿಂದ ಬೆಳೆಗಳನ್ನು ನಾಶ ಮಾಡಿದ್ದಲ್ಲದೇ, ಅಡ್ಡಿ ಪಡಿಸಿದ ರೈತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೆಲ ರೈತರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಸಂಗವು ಜರುಗಿತು.
ಅದೇನೆ ಆಗಲಿ, ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯ ಬದ್ಧವಾಗಿ ಒತ್ತುವರಿಯನ್ನು ತೆರವು ಮಾಡದೇ ರೈತರ ಮೇಲೆ ದಬ್ಬಾಳಿಕೆ ಮಾಡ್ತಾ ಇರೋದು ಮಾತ್ರ ದುರಂತವೇ ಸರಿ, ಕೂಡಲೇ ತಹಶೀಲ್ದಾರ್ ಅವರು ಈ ಬಗ್ಗೆ ಗಮನ ಹರಿಸಿ ರೈತರಿಗೆ ಆಗ್ತಿರೋ ಅನ್ಯಾಯವನ್ನು ಸರಿಪಡಿಸಬೇಕಿದೆ.