ದೆಹಲಿ :
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿ ತಲೆ ದೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಅಂತಾರಾಷ್ಟ್ರೀಯ ಗಡಿ ಹಂಚಿಕೊಳ್ಳುವ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಮಿತ್ ಶಾ ಸೂಚಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಎಸ್ಎಫ್ ಸೇರಿದಂತೆ ದೇಶದ ಗಡಿ ಭದ್ರತಾ ಪಡೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಮೂಲಕ ಆಯಾ ರಾಜ್ಯದ ಸಿಎಂ ತಮ್ಮ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ಕೂಡ ನೀಡಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರೋಗ್ಯ ಮತ್ತು ವಿಪತ್ತು ನಿರ್ವಹಣೆಗೆ ಸಿದ್ಧರಿರುವಂತೆ ಸೂಚಿಸಿದ್ದಾರೆ. ಇನ್ನು ದೆಹಲಿಯಲ್ಲಿ ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದು, ರಾತ್ರಿ ಗಸ್ತು ಹೆಚ್ಚಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಗುರುವಾರ ಸಂಜೆ ದೆಹಲಿ ಸರ್ಕಾರ ಹೊರಡಿಸಿದ ಆದೇಶದಲ್ಲಿ, ಸರ್ಕಾರಿ ಸಿಬ್ಬಂದಿಯ ರಜೆಗಳನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ. ಆರೋಗ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಸನ್ನದ್ಧತೆಯ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಅರೆ ಸೈನಿಕ ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ