ದಾವಣಗೆರೆ:
ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8. 65 ಲಕ್ಷ ರೂ ಬೆಲೆ ಬಾಳುವ 90 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಕ್ಕೆ ಪಡೆದಿದ್ದಾರೆ.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬುವರ ಮನೆಯಲ್ಲಿ ಅವರ ಹಣಕಾಸಿನ ಸಮಸ್ಯೆಯನ್ನು ಪೂಜೆ ಮಾಡಿ ಕಷ್ಟ ಬಗೆಹರಿಸುತ್ತೇವೆಂದು ಆರೋಪಿಗಳಾದ ಇಸ್ಮಾಯಿಲ್ ಜಬೀರುಲ್ಲಾ (30) ಮತ್ತು ರುಕ್ಸಾನಾ ಬೇಗಂ (28) ಎಂಬುವರು ಬಂದು ಮನೆಯಲ್ಲಿದ್ದ 1.44.000 ರೂ ಬೆಲೆಯ 2 ತೊಲ 2 ಗ್ರಾಂ ಚಿನ್ನದ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು.
ಘಟನೆ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಒರಿಸ್ಸಾ ಮೂಲದವರಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆರೋಪಿಗಳಿಂದ 8. 65 ಲಕ್ಷ ರೂ ಬೆಲೆ ಬಾಳುವ 90 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.