ಸಾಂದರ್ಭಿಕ ಚಿತ್ರತುಮಕೂರು
ತುಮಕೂರು:
ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಗಳನ್ನೇ ಬಿತ್ತರಿಸುತ್ತಾ ಬರುತ್ತಿದೆ. ಅದರಲ್ಲಿಯೂ ತುಮಕೂರು ನಗರವಾಸಿಗಳ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಅದೇ ರೀತಿ ನಗರದ ಹೃದಯ ಭಾಗದಲ್ಲೇ ಇರೋ ಮಂಡಿಪೇಟೆಯಲ್ಲಿ ರಸ್ತೆ ಒತ್ತುವರಿಯಾಗಿದ್ದರ ಬಗ್ಗೆಯೂ ಸುದ್ದಿ ಮಾಡಲಾಗಿತ್ತು.
ಈ ವೇಳೆ ಮಂಡಿಪೇಟೆಯಲ್ಲಿರುವ ಮೀನು ಮಾರಾಟಗಾರರ ಸಮಸ್ಯೆಯ ಬಗ್ಗೆಯೂ ಸುದ್ದಿ ಮಾಡಿದ್ದೇವು. ತುಮಕೂರು ನಗರದಲ್ಲಿ ಒಂದೇ ಒಂದು ಮೀನು ಮಾರುಕಟ್ಟೆ ಇಲ್ಲ. ಹೀಗಾಗಿ ಮೀನು ಮಾರಾಟಗಾರರಿಗೆ ತೊಂದರೆಯಾಗುತ್ತಿದೆ. ಬೇರೆಲ್ಲೂ ಜಾಗ ಇಲ್ಲದೇ ಇರುವುದರಿಂದ ಮಂಡಿಪೇಟೆಯಲ್ಲಿ ಮೀನು ಮಾರಾಟ ಮಾಡುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು. ಪ್ರಜಾಶಕ್ತಿ ಟಿವಿ ಬಿತ್ತರಿಸಿದ್ದ ಈ ಸುದ್ದಿಗೆ ಇದೀಗ ಫಲಶೃತಿ ಸಿಕ್ಕಿದೆ.
ಮಂಡಿಪೇಟೆಯ ರಸ್ತೆಯಲ್ಲೇ ಮೀನಿನ ಮಾರುಕಟ್ಟೆ ಇರುವುದರಿಂದ ಅಲ್ಲಿನ ಸ್ಥಳಿಯರಿಗೂ ಕೂಡ ತೊಂದರೆ ಆಗುತ್ತಿದ್ದು, ಹಾಗೂ ಮೀನಿನ ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಒಡಾಡುವಂತ ಪರಿಸ್ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ವಹಿಸಿ ನಗರದಲ್ಲಿ ಬೇರೆ ಜಿಲ್ಲೆಗಳಲ್ಲಿ ಇರುವಂತೆ ಒಂದು ಮಾಂಸ ಮಾರುಕಟ್ಟೆಯನ್ನ ನಿರ್ಮಿಸಿ ಮಾಂಸ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವರದಿಯನ್ನು ಮಾಡಲಾಗಿತ್ತು. ಇದನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಇದೀಗ ನಮ್ಮ ವರದಿಯಿಂದ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಪ್ರಜಾಶಕ್ತಿ ಟಿವಿಯ ಫಲಶೃತಿ ಎನ್ನುವಂತೆ ನಗರದ 5 ಕಡೆ ಮಾಂಸ ಮಾರುಕಟ್ಟೆ ಹಾಗೂ 2 ಕಡೆ ವಧಾಗಾರ ನಿರ್ಮಾಣಗೊಳ್ಳಲಿದೆ.
ಈ ಬಗ್ಗೆ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಘೋಷಣೆ ಮಾಡಿದ್ದಾರೆ. ಗಣರಾಜ್ಯೀತ್ಸವ ಆಚರಣೆ ಮಾಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ನಗರದಲ್ಲಿ ಐದು ಕಡೆ ಮಾಂಸ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ. ೨ ಕಡೆಗಳಲ್ಲಿ ವಧಾಗಾರ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಮೀನಿನ ಮಾರುಕಟ್ಟೆಯು ಸಹ ಇರಲಿದೆ . ಮಾಂಸ ಮಾರುಕಟ್ಟೆಯ ನಿರ್ಮಾಣದಿಂದ ಜನರು ರಸ್ಥೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ತಪ್ಪುತ್ತದೆ, ಹಾಗೂ ವ್ಯಾಪಾರಸ್ಥರಿಗೂ ಅನುಕೂಲವಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ನಗರದಲ್ಲಿ ಪ್ರತ್ಯೇಕವಾಗಿ ಮಾಂಸ ಮತ್ತು ಮೀನು ಮಾರುಕಟ್ಟೆ ನಿರ್ಮಾಣವಾಗ್ತಿರೋದು ಒಂದು ಕಡೆ ಮಾಂಸ ಮಾರಾಟಗಾರರಿಗೆ ಖುಷಿ ತರಿಸಿದೆ. ಇನ್ನೊಂದು ಕಡೆ ಮಾಂಸಹಾರಿಗಳಿಗೂ ಸಂತಸ ತರಿಸಿದ್ದು, ಸಸ್ಯಾಹಾರಿಗಳಿಗೂ ಮುಜುಗರ ತಪ್ಪಲಿದೆ.