ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ವಂಗಿಮಳ್ಳು ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯುವಾಗ ಕಾಲು ಜಾರಿ ಬಿದ್ದು ಉಪನ್ಯಾಸಕ ಸಾವನ್ನಪ್ಪಿರುವ ಘಟನೆ ನಡೆದಿದೆ. ವಂಗಿಮಳ್ಳು ಗ್ರಾಮದ ನಿವಾಸಿ ಉಪನ್ಯಾಸಕ ಶಂಕರರೆಡ್ಡಿ (48) ಎಂಬುವರು ಮೃತ ದುರ್ದೈವಿಯಾಗಿದ್ದಾರೆ.
ಶಂಕರರೆಡ್ಡಿ ಅವರು ಉಪನ್ಯಾಸಕರಾಗಿದ್ದು ಜೊತೆಗೆ ಕೃಷಿ ಕೆಲಸವನ್ನು ಮಾಡುತ್ತಿದ್ದು, ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ನಂತರ ಕೈಕಾಲು ತೊಳೆಯಲು ಕೃಷಿ ಹೊಂಡದ ಬಳಿ ತೆರಳಿದ್ದರು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಕೃಷಿಹೊಂಡದಲ್ಲಿ ಹೆಚ್ಚಾಗಿ ಪಾಚಿಕಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ರಾತ್ರಿ ಹೆಚ್ಚು ಸಮಯವಾದರೂ ಮನೆಗೂ ವಾಪಸ್ ಬರದೆ ಇರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಬಳಿಕ ಕೃಷಿಹೊಂಡದ ಬಳಿ ಶಂಕರರೆಡ್ಡಿಯ ಮೊಬೈಲ್, ಟವಲ್ ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ ತಕ್ಷಣವೇ ಶೋಧ ಕಾರ್ಯಾಚರಣೆ ನಡೆಸಿದ್ದು, ಹೊಂಡದ ಮೂಲೆಯಲ್ಲಿ ಅವರ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.