ಚುಟುಕು ಕ್ರಿಕೆಟ್ನ ಜಾತ್ರೆ ಅಂತಲೇ ಕರೆಸಿಕೊಳ್ಳೋ ಐಪಿಎಲ್ ಮಹಾಸಮರ ದಿನೇದಿನೇ ರಂಗೇರುತ್ತಿದೆ. ಘಟಾನುಘಟಿ ತಂಡಗಳೆಲ್ಲಾ ಒಂದೊಂದಾಗಿಯೇ ಸೋಲಿನ ಸುಳಿಯಲ್ಲಿ ಸಿಲುಕಿಕೊಳ್ತಿದ್ರೆ, ಒಮ್ಮೆಯೂ ಕಪ್ ಗೆಲ್ಲದ ತಂಡಗಳು ಅಜೇಯ ಓಟವನ್ನ ಮುಂದುವರೆಸಿವೆ. ನಮ್ಮ ಆರ್ಸಿಬಿ ಕೂಡ ಈ ಬಾರಿಯ ಐಪಿಎಲ್ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದು, ಇವತ್ತು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಘಟಾನುಘಟಿ ತಂಡಗಳನ್ನ ಅವರ ಕೋಟೆಯಲ್ಲಿಯೇ ಹೋಗಿ ನುಗ್ಗಿ ಹೊಡೆದು ಬಂದಿರುವ ಚಾಲೆಂಜರ್ಸ್ ಪಡೆ ಇಂದು ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಹೊಡೆಯಲು ಮುಂದಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಅಬ್ಬರಿಸೋದಕ್ಕೆ ಸಜ್ಜಾಗಿದ್ದಾನೆ ಆರ್ಸಿಬಿಯ ಆ ರಣಬೇಟೆಗಾರ.
ಇವತ್ತಿನ ಪಂದ್ಯ ಆರ್ಸಿಬಿಯ ಹೋಮ್ ಗ್ರೌಂಡ್ ಚಿನ್ನಸ್ವಾಮಿಯಲ್ಲಿ ನಡೆಯಲಿದೆ. ಹೀಗಾಗಿ ಇವತ್ತು ಚಿನ್ನಸ್ವಾಮಿ ಅಂಗಳದಲ್ಲಿ ರನ್ ಹೊಳೆ ಹರಿಯೋದು ಪಕ್ಕಾ ಆಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಆರ್ಸಿಬಿಯ ಬ್ಯಾಟ್ಸ್ಮನ್ಗಳು ಸಿಕ್ಸರ್, ಬೌಂಡರಿಗಳ ಮಳೆ ಸುರಿಸಿದ್ರು. ಇದೀಗ ಆರ್ಸಿಬಿ ತಂಡಕ್ಕೆ ಮತ್ತೊಬ್ಬ ರಣಬೇಟೆಗಾರ ಎಂಟ್ರಿಕೊಡಲಿದ್ದಾನೆ.
ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಲು ಆರ್ಸಿಬಿ ಸ್ಫೋಟಕ ಬ್ಯಾಟರ್ ಅನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಈ ಸ್ಫೋಟಕ ಬ್ಯಾಟರ್ ಆಡುವ ಅವಕಾಶ ಪಡೆದುಕೊಂಡರೆ ಗುಜರಾತ್ ತಂಡವನ್ನು ಸುಲಭವಾಗಿ ಸೋಲಿಸಬಹುದು. ಈ ಸ್ಫೋಟಕ ಬ್ಯಾಟರ್ ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ತಂಡದ ಪರ ಇತ್ತೀಚೆಗೆ ಮಿಂಚುತ್ತಿರುವ ಯುವ ಬ್ಯಾಟಿಂಗ್ ಆಲ್ರೌಂಡರ್ ಜಾಕೋಬ್ ಬೆಥೆಲ್.
ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಮೂಲಕ ಜಾಕೋಬ್ ಬೆಥೆಲ್ ಐಪಿಎಲ್ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಮೊದಲ ತವರಿನ ಪಂದ್ಯವನ್ನು ಗೆಲ್ಲುವ ಗುರಿಯನ್ನು ಹೊಂದಿರುವ ಆರ್ಸಿಬಿ, ಬಲಿಷ್ಠ ತಂಡದೊಂದಿಗೆ ಗುಜರಾತ್ ಟೈಟಾನ್ಸ್ ಅನ್ನು ಎದುರಿಸೋಕೆ ಸಜ್ಜಾಗಿದೆ. ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಜಾಕೋಬ್ ಬೆಥೆಲ್ ಇಂದು ಆರ್ಸಿಬಿ ಪರ ಮೈದಾನಕ್ಕಿಳಿಯುವ ಸಾಧ್ಯತೆಯಿದೆ.
ಹಾಗಿದ್ರೆ ಯಾರ ಬದಲಾಗಿ ಜಾಕಬ್ ಬೇಥಲ್ ಕಣಕ್ಕಿಳಿಯಬಹುದು ಅನ್ನೋದನ್ನ ಕೂಡ ನಾವ್ ಹೇಳ್ತಾ ಹೋಗ್ತೀವಿ ನೋಡಿ. ಲೆಕ್ಕಾಚಾರಗಳ ಪ್ರಕಾರ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟನ್ ಅವರ ಬದಲು ಜಾಕಬ್ ಬೇಥಲ್ ಅವ್ರು ಕಣಕ್ಕಿಳಿಯುವಂತಹ ಸಾಧ್ಯತೆಯಿದೆ. ಕಳೆದ ಎರಡು ಪಂದ್ಯಗಳಿಂದ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಸಾಮಾನ್ಯ ಪ್ರದರ್ಶನವನ್ನ ನೀಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ. ಲಿವಿಂಗ್ಸ್ಟೋನ್ ಹೊರಗುಳಿದರೆ, ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಮೈದಾನಕ್ಕಿಳಿಯಲಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಇದೀಗ ಎಲ್ಲರ ಚಿತ್ತ ಬೆಥೆಲ್ ಮೇಲೆ ನೆಟ್ಟಿದೆ.