ಬೆಂಗಳೂರು :
ವಿಧಾನಸಭಾ ಅಧಿವೇಶನದ ವೇಳೆ ಸದನದಲ್ಲಿಯೇ ಬಜೆಟ್ ಪ್ರತಿಯನ್ನು ಹರಿದು ಹಾಕಿ ಸಭಾಧ್ಯಕ್ಷರ ಮುಖದ ಮೇಲೆ ಎಸೆದು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿಸಿದ್ದ 18 ಶಾಸಕರನ್ನು ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದರು. ಸಭಾಪತಿಯ ಪೀಠದ ಬಳಿಯೇ ಹೋಗಿ ಪ್ರತಿಭಟಿಸುತ್ತಿದ್ದ ಬಿಜೆಪಿ ಶಾಸಕರನ್ನು ಮಾರ್ಷಲ್ಗಳು ಎತ್ತಿಕೊಂಡು ಹೋಗಿ ಹೊರಗೆ ಹಾಕಿದರು. ಇದಾದ ನಂತರ ಬಿಜೆಪಿಗರು ವಿಧಾನಸೌಧದ ಮುಂಭಾಗ ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ೧೮ ಮಂದಿ ಬಿಜೆಪಿ ಶಾಸಕರ ಅಮಾನತನ್ನು ಹಿಂಪಡೆಯುವಂತೆ ಬಿಜೆಪಿಗರು ಕಸರತ್ತು ನಡೆಸುತ್ತಲೇ ಇದ್ದಾರೆ. ತಮ್ಮ ಆದೇಶವನ್ನು ಹಿಂಪಡೆಯುವಂತೆ ಬಿಜೆಪಿಯ ಹಿರಿಯ ನಾಯಕರು ಸ್ಪೀಕರ್ ಖಾದರ್ ಅವರಿಗೆ ಮನವಿ ಮಾಡಿದ್ರು. ಆದರೆ ಸಭಾಪತಿ ಯು.ಟಿ.ಖಾದರ್ ಮಾತ್ರ ತಮ್ಮ ಆದೇಶವನ್ನು ಹಿಂಪಡೆದಿರಲಿಲ್ಲ. ಹೀಗಾಗಿ ಇದೀಗ ಬಿಜೆಪಿ ನಾಯಕರು ರಾಜ್ಯಪಾಲರ ಮೊರೆ ಹೋಗಿದ್ದಾರೆ.
ಇನ್ನು ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಖುದ್ದು ಸ್ಪೀಕರ್ ಯು.ಟಿ.ಖಾದರ್ ಗೆ ಪತ್ರವನ್ನು ಬರೆದಿದ್ದರು. ಜನಸಾಮಾನ್ಯರ ಹಿತದೃಷ್ಟಿಯಿಂದ ಸನ್ಮಾನ್ಯ ಸಭಾಧ್ಯಕ್ಷರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಬರೆದಿದ್ದಾರೆ. 18 ಶಾಸಕರ ಅಮಾನತು ರದ್ದುಗೊಳಿಸುವಂತೆ ಮನವಿ ಕೂಡ ಮಾಡಿದ್ದರು. ಆದರೆ ಆ ಪತ್ರಕ್ಕೂ ಯು.ಟಿ.ಖಾದರ್ ಸೊಪ್ಪು ಹಾಕಿರಲಿಲ್ಲ.
ಆದಾದ ಬಳಿಕ ಬಿಜೆಪಿ ಶಾಸಕರ ಅಮಾನತು ಆದೇಶದ ವಿರುದ್ಧ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಯು.ಟಿ.ಖಾದರ್ ಜಗ್ಗಿರಲಿಲ್ಲ. ಇನ್ನು ಇತ್ತೀಚೆಗೆ ಮತ್ತೊಮ್ಮೆ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಂಡ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ, 18 ಶಾಸಕರ ಅಮಾನತು ಆದೇಶವನ್ನು ಹಿಂಪಡಿಯಬೇಕೆಂದು ಮನವಿ ಮಾಡಿದ್ರು. ಇದಕ್ಕೂ ಸ್ಪೀಕರ್ ಯು.ಟಿ.ಖಾದರ್ ಕ್ಯಾರೆ ಅಂದಿರಲಿಲ್ಲ. ಹೀಗಾಗಿ ಬಿಜೆಪಿ ನಾಯಕರು ಸಪ್ಪೆ ಮೋರೆ ಹಾಕಿಕೊಂಡು ಅಲ್ಲಿಂದ ವಾಪಾಸಾಗಿದ್ದರು.
ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖುದ್ದಾಗಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ರನ್ನು ಭೇಟಿ ಮಾಡಿದ್ರು. ಆ ಮೂಲಕ 18 ಜನ ಶಾಸಕರ ಅಮಾನತು ಹಿಂಪಡೆಯಲು ತಾವುಗಳು ಸಹಕರಿಸಬೇಕು. ಅಮಾನತು ತೆರವುಗೊಳಿಸುವ ಕುರಿತು ತಮ್ಮ ಅಧಿಕಾರವನ್ನು ಚಲಾಯಿಸುವಂತೆ ಬಿಜೆಪಿ ನಿಯೋಗ ಕೇಳಿಕೊಂಡಿತ್ತು. ಶಾಸಕರ ಅಮಾನತು ಕುರಿತು ಸ್ಪೀಕರ್ ಯು.ಟಿ.ಖಾದರ್ ಗೆ ಪತ್ರ ಬರೆಯುವಂತೆ ಮನವಿ ಮಾಡಿದ್ದರು.
ಬಿಜೆಪಿ ನಿಯೋಗದ ಮನವಿಯಂತೆ ಇದೀಗ ರಾಜ್ಯಪಾಲರು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. 18 ಮಂದಿ ಬಿಜೆಪಿ ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ.