ಸಿನಿಮಾ : ಕಾಲಿವುಡ್ನ ಖ್ಯಾತ ನಟ ವಿಶಾಲ್ ತಮ್ಮ ಆಪ್ತ ಸ್ನೇಹಿತೆ ಆಗಿರುವ ನಟಿ ಸಾಯಿ ಧನ್ಶಿಕಾ ಜೊತೆ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ. ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಇವರ ವಿವಾಹವು ಆಗಸ್ಟ್ 29ರಂದು ನಡೆಯಲಿದೆ ಎಂಬುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಚೆನ್ನೈನಲ್ಲಿ ನಡೆದ ‘ಯೋಗಿದ’ ಚಿತ್ರದ ಪ್ರೆಸ್ ಮೀಟ್ನಲ್ಲಿ ಈ ವಿಷಯವನ್ನು ಬಯಲಿಗೆ ತಂದ ನಟ ವಿಶಾಲ್, ಧನ್ಶಿಕಾ ನನ್ನನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡವರು. ಅವರ ತಂದೆಯ ಅನುಮತಿ ಹಾಗೂ ಆಶೀರ್ವಾದದಿಂದಲೇ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಮದುವೆಯ ನಂತರವೂ ಧನ್ಶಿಕಾ ತಮ್ಮ ನಟನ ಕಾರ್ಯದ ಬಗ್ಗೆ ಮುಂದುವರಿಯಲಿದ್ದಾರೆ, ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸಾಯಿ ಧನ್ಶಿಕಾ, ನಾವು ಈ ಸುದ್ದಿಯನ್ನು ಇನ್ನೂ ಕೆಲವು ದಿನಗಳು ರಹಸ್ಯವಾಗಿಟ್ಟುಕೊಳ್ಳಬೇಕೆಂದು ಯೋಚಿಸಿದ್ದೆವು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ನಾವು ಸ್ವತಃ ಮದುವೆ ದಿನಾಂಕವನ್ನು ಘೋಷಿಸಲು ನಿರ್ಧರಿಸಿದ್ದೇವೆ. ಕಳೆದ 15 ವರ್ಷಗಳಿಂದ ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ, ಈಗ ಅದನ್ನು ಜೀವನ ಸಂಗಾತಿ ಆಗಿ ಮುಂದುವರೆಸಲು ನಿರ್ಧರಿಸಿದ್ದೇವೆ, ಎಂದು ತಿಳಿಸಿದ್ದಾರೆ.
ಮದುವೆಗೆ ಮುಂಚಿತವಾಗಿ, ಆಗಸ್ಟ್ 15ರಂದು ನಟರ ಸಂಘದ ಕಟ್ಟಡ ಉದ್ಘಾಟನೆ ನಡೆಯಲಿದ್ದು, ಬಳಿಕ 29ರಂದು ಇವರ ಮದುವೆ ನಡೆಯಲಿದೆ. ವಿಶಾಲ್ ಹಾಗೂ ಧನ್ಶಿಕಾರ ಈ ಹೊಸ ಆರಂಭಕ್ಕೆ ಚಿತ್ರರಂಗದ ಹಲವರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.