ಕೊರಟಗೆರೆ:
ಕೆರೆಯ ದಂಡೆ ಮೇಲೆ ರಾಶಿ ರಾಶಿ ಕೋಳಿ ತ್ಯಾಜ್ಯ, ಮದ್ಯದ ಬಾಟಲ್ಗಳು, ಮೆಡಿಕಲ್ ವೇಸ್ಟ್ಗಳು. ಕಸದ ರಾಶಿಗೆ ಮುಗಿ ಬಿದ್ದ ಬೀದಿ ನಾಯಿಗಳ ಹಿಂಡು. ಕಸ ಕೊಳೆತು ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ. ಇವೆಲ್ಲಾ ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯ ಕೆರೆಯ ಬಲದಂಡೆಯ ರಾಜಕಾಲುವೆಯ ದೃಶ್ಯಗಳು.
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಇರಕಸಂದ್ರ ಕಾಲೋನಿಯಲ್ಲಿ 8ಕ್ಕೂ ಹೆಚ್ಚು ಕೋಳಿ ಅಂಗಡಿಗಳು, ಎರಡು ಮೆಡಿಕಲ್ ಶಾಪ್ಗಳು ಹಾಗೂ ಎರಡು ಮದ್ಯದ ಅಂಗಡಿಗಳಿಂದ ನಿತ್ಯ ರಾತ್ರಿ ವೇಳೆ ಇರಕಸಂದ್ರ ಕಾಲೋನಿಯ ಕೆರೆಯ ಬಲದಂಡೆಯ ರಾಜಕಾಲುವೆಗೆ ಕೊಳೆತ ಕಸ, ಸತ್ತ ಕೋಳಿಗಳು, ಮೆಡಿಕಲ್ ಅಂಗಡಿಯಿಂದ ಸಿಂರಜ್, ಟ್ಯಾಬ್ಲೆಟ್, ಮದ್ಯದ ಬಾಟಲ್ಗಳನ್ನು ಸುರಿದು ಹೋಗುತ್ತಿದ್ದು ಪರಿಸರವನ್ನು ಹಾಳು ಮಾಡುತ್ತಿವೆ.
ರಾಜಕಾಲುವೆಗೆ ಸುರಿಯುವ ಕೋಳಿತ್ಯಾಜ್ಯ ಮತ್ತು ಮೆಡಿಕಲ್ ವೇಸ್ಟ್ ಕೊಳೆತು ದುರ್ವಾಸನೆ ಬೀರುತ್ತಿದೆ. ದುರ್ವಾಸನೆ ಬೀರುತ್ತಿರುವ ಕೋಳಿ ಮಾಂಸ ತಿನ್ನಲು ನಾಯಿಗಳ ಹಿಂಡು ಹಿಂಡು ಬರುತ್ತಿವೆ. ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಒಂದ್ಕಡೆ ಪರಿಸರವೂ ಹಾಳಾಗುತ್ತಿದೆ ಅಲ್ಲದೇ ಚಿರತೆ ಕಾಟವೂ ಶುರುವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಶಿ ರಾಶಿ ಕಸದ ತ್ಯಾಜ್ಯದಿಂದಾಗಿ ಸ್ಥಳೀಯರಲ್ಲಿ ಅನಾರೋಗ್ಯ ಭೀತಿ ಹೆಚ್ಚಾಗಿದೆ.
ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕಸ ವಿಲೇವಾರಿ ವಾಹನವೂ ಕೂಡ ಇಲ್ಲ. ಇರಕಸಂದ್ರ ಕಾಲೋನಿ ಮತ್ತು ನೀಲಗೊಂಡನಹಳ್ಳಿ ಗ್ರಾಮದಲ್ಲಿ ಸ್ವಚ್ಚತೆ ಎಂಬುವುದು ಮರೀಚಿಕೆ ಆಗಿದ್ದರೂ ಕೂಡ ಗ್ರಾಮ ಪಂಚಾಯ್ತಿ ಪಿಡಿಓ, ಅಧ್ಯಕ್ಷರು ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ವಚ್ಛತೆ ಬಗ್ಗೆ ಪ್ರಶ್ನಿಸಿದರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಉಡಾಫೆ ಉತ್ತರ ಕೊಡ್ತಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.
ಒಟ್ಟಿನಲ್ಲಿ ರಾಜಕಾಲುವೆಯಲ್ಲಿ ಕೊಳೆತ ಕೋಳಿತ್ಯಾಜ್ಯದ ದುರ್ವಾಸನೆಯಿಂದ ಅನೈರ್ಮಲ್ಯ ಹೆಚ್ಚಾಗ್ತಿದೆ. ಅನೈರ್ಮಲ್ಯದಿಂದ ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುವ ಮುನ್ನ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ತಾಲೂಕು ಪಂಚಾಯ್ತಿ ಇಓ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.