ಚಿಕ್ಕಮಗಳೂರು :
ಜಿಲ್ಲೆಯಲ್ಲಿ ಸುಡು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕಾಡ್ಗಿಚ್ಚು, ಬೆಂಕಿ ಆಕಸ್ಮಿಕ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೀಗ ಕಾಡ್ಗಿಚ್ಚಿನ ಪರಿಣಾಮದಿಂದಾಗಿ ಬೆಂಕಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಗೆಗೆ ಅಪಾರ ಪ್ರಮಾಣದ ಸಸ್ಯ ಸಂಕುಲ ಮತ್ತು ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸರಗೋಡು ಮತ್ತು ಕುಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಾಡ್ಗಿಚ್ಚಿನ ಪರಿಣಾಮದಿಂದಾಗಿ ಗಾಳಿಯ ವೇಗಕ್ಕೆ ಬೆಂಕಿಯು ಹೆಚ್ಚು ವ್ಯಾಪಿಸಿದ್ದು, ಬೆಂಕಿಯು ಅರಣ್ಯ ಪ್ರದೇಶಕ್ಕೆ ಮಾತ್ರವಲ್ಲದೇ ಖಾಸಗಿ ಭೂ ಪ್ರದೇಶಗಳಾದ ಕಾಫಿ , ಅಡಿಕೆ ತೋಟಗಳಿಗೂ ಬೆಂಕಿ ವ್ಯಾಪಿಸಿದೆ. ಕಿಡಿಗೇಡಿಗಳ ಕೃತ್ಯದಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಅಪಾರ ಪ್ರಮಾಣದ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಬೆಂಕಿ ಹಾಕುತ್ತಿರುವವರು ಸ್ಥಳೀಯರೋ ಅಥವಾ ಪ್ರವಾಸಿಗರಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆಯೋ ಅಥವಾ ಆಕಸ್ಮಿಕ ಬೆಂಕಿ ಅನ್ನೋದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡರೆ ನಂದಿಸುವುದು ಬಹಳ ಕಷ್ಟದ ಕೆಲಸ ಹೀಗಾಗಿ, ಕಾಡಿನ ರಕ್ಷಣೆಗೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.