ಚಿಕ್ಕಬಳ್ಳಾಪುರ:
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿ ಕೊಳ್ಳೋದೇ ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ಬೆಳೆ ಸೊಂಪಾಗಿ ಬೆಳೆಸಲೆಂದು ಗೊಬ್ಬರ, ಕೀಟನಾಶಕಗಳನ್ನು ಬಳಸಿ ಮಕ್ಕಳಂತೆ ಸಾಕಿ ಸಲುಹಿದ್ದ ಬೆಳೆ, ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಯಡವಟ್ಟಿಗೆ ಇಡೀ ಹೂ ತೋಟವೇ ಸುಟ್ಟು ಹೋಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವವರು 30 ಗುಂಟೆ ಜಮೀನಿನಲ್ಲಿ ಬಿಳಿ ಬಣ್ಣದ ಕ್ರಿಸ್ಯಾಂಥಮಮ್ ಎಂಬ ವೆರೈಟಿ ಹೂವನ್ನು ಬೆಳೆದಿದ್ದರು. ಆದ್ರೆ ಬಿಳಿ ಬಣ್ಣದ ಹೂಗಳು ಮತ್ತಷ್ಟು ಶೈನಿಂಗ್ ಬರಲಿ ಎಂದು ಮಂಜುನಾಥ್ ಫೆಸ್ಟೆಸೈಡ್ ಶಾಪ್‌ನ ಮಾಲೀಕನೀಡಿದ್ದ ಮದ್ದು ಸಿಂಪಡಣೆ ಮಾಡಿದ್ದರು. ಆದ್ರೆ ಔಷಧಿ ಸಿಂಪಡಿಸಿದ್ದ ಬಳಿಕ ಹೂದೋಟವೇ ಸುಟ್ಟು ಹೋಗಿದೆ.
ಬಿಳಿ ಬಣ್ಣದ ಕ್ರಿಸ್ಯಾಂಥಮಮ್ ಎಂಬ ಹೂವನ್ನು ಬೆಳದಿದ್ದು, 3 ತಿಂಗಳ ನಂತರ ಹೂ ಕೂಡ ಶುಭ್ರ ಬಿಳಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಹೂ ತೋಟವನ್ನು ಎರಡು ಕಣ್ಣುಗಳಿಂದ ನೋಡಲು ಸಾಲದು ಎಂಬಂತೆ ಬಿಳಿ ಬಣ್ಣದ ಹೂಗಳೇ ತುಂಬಿ ತುಳುಕುತ್ತಿತ್ತು. ಆದ್ರೆ ಹೂ ತೋಟದ ಮಾಲೀಕ ಮಂಜುನಾಥ್ ಹೂಗಳು ಮತ್ತಷ್ಟು ಶೈನಿಂಗ್ ಬರಲೆಂದು ಅಬ್ಲೂಡು ಗ್ರಾಮದ ಬಳಿ ಇರೋ ಫೆಸ್ಟೆಸೈಡ್ ಶಾಪ್ ನಲ್ಲಿ ತಾವು ಯಾವಾಗಲೂ ಬಳಸುತ್ತಿದ್ದ ಮದ್ದನ್ನೇ ಕೊಡುವಂತೆ ಕೇಳಿದ್ದಾರಂತೆ.
ಆದ್ರೆ ಅಂಗಡಿಮಾಲೀಕ ಅದು ಬೇಡ ಇದು ತಗೊಂಡು ಹೋಗಿ, ಹೂ ಮತ್ತಷ್ಟು ಶೈನಿಂಗ್ ಬರುತ್ತೆ ಅಂತ ಮತ್ತೊಂದು ಕಂಪನಿಯ ಮದ್ದು ಕೊಟ್ಟಿದ್ದಾರೆ.ಅದ್ರಿಂದಲೇ ಹೂವು ಬಾಡಿ ಹೋಗಿ ಸುಟ್ಟು ಹೋದಂತಾಗಿದೆ ಅಂತಾ ರೈತ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಸಾಲ ಸೋಲ ಮಾಡಿ 5-6 ಲಕ್ಷ ಖರ್ಚು ಮಾಡಿ ಬೆಳೆದ ಹೂದೋಟ ಒಂದೇ ದಿನಕ್ಕೆ ಬಾಡಿ ಹೋಗಿದೆ. ಇದ್ರಿಂದ ಇರೋ ಬರೋ ಹೂವನ್ನ ಕಿತ್ತು ಈಗ ತಿಪ್ಪಗೆ ಎಸೆಯುವಂತಾಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಅದೊಂದು ಯಡವಟ್ಟಿಗೆ ಇಡೀ ಹೂದೋಟವೋ ನಾಶವಾಗಿದೆ.ಹೀಗಾಗಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಸಾಲಕ್ಕೆ ಸಿಲುಕಿ ಬೀದಿಗೆ ಬರುವಂತಾಗಿದೆ. ಕೂಡಲೇ ಹೂ ತೋಟ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ಕೊಡಬೇಕೆಂದು ರೈತ ಮುಖಂಡ ರವಿ ಪ್ರಕಾಶ್ ಆಗ್ರಹಿಸಿದರು.