Pavagada Accident News : ಎಪಿಎಸ್ಆರ್ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಕಾರು ಚಾಲಕ ಸಾವನ್ನಪ್ಪಿದ್ರೆ, ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯ..!!

Pavagada Accident News :ಎಪಿಎಸ್ಆರ್ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಕಾರು ಚಾಲಕ ಸಾವನ್ನಪ್ಪಿದ್ರೆ, ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾವಗಡ ತಾಲೂಕಿನ ಕಡಮಲಕುಂಟೆ ಕೈಗಾರಿಕಾ ಪ್ರದೇಶದ ಪೆನುಕೊಂಡ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಐವಾರ್ಲಹಳ್ಳಿ ನಿವಾಸಿ ಚಂದ್ರಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ.
ಪಾವಗಡದಿಂದ ಪೆನುಕೊಂಡದ ಕಡೆಗೆ ಸಾಗುತ್ತಿದ್ದ ಇನೋವಾ ಕಾರಿಗೆ ಪೆನುಕೊಂಡದಿಂದ ಪಾವಗಡದ ಕಡೆಗೆ ಬರುತ್ತಿದ್ದ ಎಪಿಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇನ್ನು ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿದ್ದು, ಇನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ರಿಂದ 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಅಪಘಾತದಲ್ಲಿ ಶಾಲಾ ಶಿಕ್ಷಕರು ಸೇರಿದಂತೆ ವೃದ್ಧರು ಹಾಗೂ ವಿದ್ಯಾರ್ಥಿನಿಯರೂ ಗಾಯಗೊಂಡಿದ್ದು, ಸಿಇಟಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಅಪಘಾತ ಸಂಭವಿಸಿದ ಸ್ಥಳ ತಿರುವುಗಳಿಂದ ಕೂಡಿದ್ದು, ಈ ಹಿಂದೆ ಹಲವು ಬಾರಿ ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೂಡಲೇ ಈ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ವಿಷಯ ತಿಳಿದು ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಹಾಗೂ ಪೊಲೀಸ್ ಸಿಬ್ಬಂದಿ ನಾಗೇಶ್ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




