Job Alert : 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ – ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 18, 2026ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಅರ್ಜಿ ಶುಲ್ಕ ಪಾವತಿಗೆ ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ.
ನೇಮಕಾತಿ ಪಾರದರ್ಶಕವಾಗಿ ನಡೆಯುವಂತೆ ಸೂಚನೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದನ್ನು ಪ್ರಕಟಿಸಿದ್ದು, ಞಈ ಹಿಂದೆ ಒಳ ಮೀಸಲಾತಿ ಸೇರಿದಂತೆ ವಿವಿಧ ಕಾನೂನು ಹಾಗೂ ಆಡಳಿತಾತ್ಮಕ ಕಾರಣಗಳಿಂದ ವಿಳಂಬವಾಗಿದ್ದ ಪ್ರಕ್ರಿಯೆಯನ್ನು ಇದೀಗ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. ನೇಮಕಾತಿ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ 6,967 ಹುದ್ದೆ
ಒಟ್ಟು 15,000 ಹುದ್ದೆಗಳನ್ನು ಎರಡು ವೃಂದಗಳಾಗಿ ವಿಂಗಡಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 6,967 ಹಾಗೂ ಉಳಿಕೆ ಮೂಲ ವೃಂದಕ್ಕೆ 8,033 ಹುದ್ದೆಗಳನ್ನು ಮೀಸಲಿಡಲಾಗಿದೆ.
ಹುದ್ದೆಗಳ ವಿವರ
ನೇಮಕಾತಿಯಲ್ಲಿ ವಿವಿಧ ಬೋಧಕ ಹುದ್ದೆಗಳು ಒಳಗೊಂಡಿವೆ. ಅವುಗಳ ವಿವರ ಹೀಗಿದೆ:
- ಪದವೀಧರ ಪ್ರಾಥಮಿಕ ಶಿಕ್ಷಕರು (GPT): 8,500
- ಸಹಾಯಕ ಮಾಸ್ಟರ್ಗಳು (AM): 4,500
- ಪ್ರಾಥಮಿಕ ಶಾಲಾ ಶಿಕ್ಷಕರು (PST): 900
- ದೈಹಿಕ ಶಿಕ್ಷಣ ಶಿಕ್ಷಕರು (PET): 600
- ಗಣಕ ವಿಜ್ಞಾನ ಶಿಕ್ಷಕರು (CST): 500
ಒಟ್ಟು 15,000 ಹುದ್ದೆಗಳು ಭರ್ತಿಯಾಗಲಿವೆ.
ಇದನ್ನು ಓದಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ!

ಜಿಲ್ಲಾವಾರು ಅಧಿಸೂಚನೆ
ಶೈಕ್ಷಣಿಕ ಜಿಲ್ಲೆಗಳಲ್ಲಿನ ಖಾಲಿ ಹುದ್ದೆಗಳ ಆಧಾರದ ಮೇಲೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿ ನೇಮಕಾತಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಜಿಲ್ಲೆ ಹಾಗೂ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಆರಂಭ: ಆಗಸ್ಟ್ 18, 2026
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 7, 2026
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: ಸೆಪ್ಟೆಂಬರ್ 10, 2026
ಪರೀಕ್ಷೆ: ದಿನಾಂಕ ಪ್ರಕಟವಾಗಬೇಕಿದೆ.
ಸರ್ಕಾರಿ ಶಿಕ್ಷಕರ ಹುದ್ದೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಮಹತ್ವದ ಅವಕಾಶವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಜಿಲ್ಲಾವಾರು ಹುದ್ದೆಗಳು ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಎಲ್ಲ ನಿಯಮಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.

ಇದನ್ನು ನೋಡಿ : 9 ತಿಂಗಳಾದ್ರೂ ಸಿಗದ ಬೆಳೆವಿಮೆ – ಕಚೇರಿಗೆ ಬೀಗ ಜಡಿದು ರೈತರ ಆಕ್ರೋಶ




