ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ

ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಆರೋಪಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ಬಸವರಾಜ್ ಕನ್ನಾಳೆಯ ಹಿಂದಿನ ಚಟುವಟಿಕೆಗಳು, ರಾಜಕೀಯ ನಾಯಕರೊಂದಿಗಿನ ಸಂಪರ್ಕ ಹಾಗೂ ಪರೀಕ್ಷಾರ್ಥಿಗಳೊಂದಿಗೆ ಹೊಂದಿದ್ದ ಎನ್ನಲಾದ ವ್ಯವಹಾರಗಳ ಕುರಿತು ಹಲವು ಆರೋಪಗಳು ಮುನ್ನೆಲೆಗೆ ಬಂದಿವೆ.

ರಾಜಕೀಯ ಮುಖಂಡರೊಂದಿಗೆ ಸಂಪರ್ಕ
ಕೆಪಿಎಸ್ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದ ಬಸವರಾಜ್ ಕನ್ನಾಳೆ, ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ರಾಜಕೀಯ ಮುಖಂಡರೊಂದಿಗೆ ಸಂಪರ್ಕ ಬೆಳೆಸಿಕೊಂಡು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋಗಳನ್ನು ತೋರಿಸಿ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಪರೀಕ್ಷಾರ್ಥಿಗಳನ್ನು ನಂಬಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
READ THIS : RSS ಅವಹೇಳನ ಕೇಸ್ನಲ್ಲಿ ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಬಿಗ್ ರಿಲೀಫ್!

ಗ್ಯಾನೇಂದ್ರ ಕುಮಾರ್ ಅವರೊಂದಿಗೆ ಮಧ್ಯವರ್ತಿಯಾಗಿ ಸಂಪರ್ಕ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಪರೀಕ್ಷಾರ್ಥಿಗಳಿಂದ ಹಣ ಪಡೆದಿದ್ದಾನೆ ಎನ್ನಲಾಗಿದ್ದು, ಈ ಹಣದ ವ್ಯವಹಾರದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರೊಂದಿಗೆ ಮಧ್ಯವರ್ತಿಯಾಗಿ ಸಂಪರ್ಕ ಸಾಧಿಸಿದ್ದನೆಂಬ ಆರೋಪವೂ ಇದೆ. ಬಸವರಾಜ್ ಕನ್ನಾಳೆ ಸುಮಾರು 12 ಪರೀಕ್ಷಾರ್ಥಿಗಳನ್ನು ಗ್ಯಾನೇಂದ್ರ ಕುಮಾರ್ ಅವರೊಂದಿಗೆ ಸಂಪರ್ಕಿಸಿದ್ದಾನೆ ಎನ್ನಲಾಗುತ್ತಿದೆ.
ಭಾಲ್ಕಿಯಿಂದ ದೆಹಲಿವರೆಗೆ ಸಂಪರ್ಕ?
ಬಸವರಾಜ್ ಕನ್ನಾಳೆಯ ಚಟುವಟಿಕೆಗಳು ಕೇವಲ ಭಾಲ್ಕಿ ಅಥವಾ ಬೆಂಗಳೂರಿಗೆ ಸೀಮಿತವಾಗಿರದೆ, ದೆಹಲಿವರೆಗೂ ಸಂಪರ್ಕ ಹೊಂದಿದ್ದವು ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಜಕೀಯ ಹಾಗೂ ಅಧಿಕಾರಿಗಳೊಂದಿಗಿನ ಸಂಪರ್ಕವನ್ನು ಬಳಸಿಕೊಂಡು ಪರೀಕ್ಷಾರ್ಥಿಗಳನ್ನು ಸೆಳೆಯುತ್ತಿದ್ದ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ, ಅವರ ಸಂಪೂರ್ಣ ಜಾಲದ ಕುರಿತು ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಆಸ್ತಿ ಗಳಿಕೆ ಬಗ್ಗೆಯೂ ಆರೋಪ
ಬಸವರಾಜ್ ಕನ್ನಾಳೆ ಅಲ್ಪಾವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾನೆ ಎನ್ನುವ ಆರೋಪಗಳು ಕೂಡ ಕೇಳಿಬಂದಿವೆ.
ಬೆಂಗಳೂರಿನಲ್ಲಿ ಸ್ವಂತ ಮನೆ, ಭಾಲ್ಕಿ ಪಟ್ಟಣದಲ್ಲಿ ಬೃಹತ್ ಕಟ್ಟಡದ ನಿವಾಸ ಹಾಗೂ ಸ್ವಗ್ರಾಮದಲ್ಲಿ ಕೋಟ್ಯಂತರ ಮೌಲ್ಯದ ಜಮೀನು ಖರೀದಿಸಿದ್ದಾನೆ ಎನ್ನಲಾಗುತ್ತಿದೆ.
ಆದರೆ, ಈ ಆಸ್ತಿಗಳ ಮೂಲ, ಹಣದ ವ್ಯವಹಾರ ಹಾಗೂ ಅವುಗಳಿಗೆ ನೇಮಕಾತಿ ಹಗರಣದೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
MUST WATCH : ಮಾಧ್ಯಮದವರ ಪ್ರಶ್ನೆಗೆ ಸಿದ್ದು ಸೈಲೆಂಟ್ ನೋ ಕಾಮೆಂಟ್ಸ್ ಎಂದಿದ್ದೇಕೆ ಮಾಜಿ ಸಿಎಂ





