D.K Shivakumar ಪದಗ್ರಹಣಕ್ಕೆ ಕೌಂಟ್ಡೌನ್ – ಅಧಿಕಾರ ಬಿಟ್ಟುಕೊಟ್ಟ ಸಿದ್ದುರನ್ನ ಹಾಡಿಹೊಗಳಿದ ಡಿಕೆಶಿ

ರಾಜ್ಯ ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ನಿನ್ನೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಇಂದು ರಾಜ್ಯಪಾಲರು ಸಿದ್ದು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದೊಂದಿಗೆ ರಾಜ್ಯದಲ್ಲಿ ನೂತನ ಸಿಎಂ ಹಾಗೂ ಸಂಪುಟ ಸಚಿವರ ಪದಗ್ರಹಣಕ್ಕೆ ವೇದಿಕೆ ಸಿದ್ಧವಾಗ್ತಿದೆ.
ನೂತನ ಸಿಎಂ ಯಾರಾಗ್ತಾರೆ..?
ನೂತನ ಸಿಎಂ ಯಾರಾಗ್ತರೆ ಅನ್ನೋದನ್ನ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಘೋಷಣೆ ಮಾಡದಿದ್ದರು, D.K Shivakumar ಮುಂದಿನ ಮುಖ್ಯಮಂತ್ರಿ ಆಗ್ತಾರೆ ಅಂತಾ ಸಿದ್ದರಾಮಯ್ಯ ತಿಳಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ದೆಹಲಿಯಲ್ಲಿ ಸರ್ಕಾರ ರಚನೆ ಬಗ್ಗೆ ಹೈಕಮಾಂಡ್ ಜೊತೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ಯಾವುದೇ ಕೋಪ, ಅಸಮಾಧಾನ ಇಲ್ಲದೇ ಹೋಟೆಲ್ನಲ್ಲಿ ಅನ್ಯೂನ್ಯವಾಗಿ ಊಟ ಸವಿದಿರುವುದು ಗಮನ ಸೆಳೆದಿದೆ.

ಸೋಮವಾರ ಸಂಜೆ ಡಿಕೆಶಿಗೆ ಪಟ್ಟಾಭಿಷೇಕ ಸಾಧ್ಯತೆ
ಇನ್ನು ನಾಳೆ ಸಂಜೆ 4 ಗಂಟೆಗೆ ಸಿಎಲ್ಪಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಯಾರಾಗ್ತಾರೆ, ಡಿಸಿಎಂ ಎಷ್ಟು ಜನಕ್ಕೆ ಸಿಗುತ್ತೆ. ಸಚಿವ ಸ್ಥಾನ ಯಾರ್ ಯಾರಿಗೆ ಸಿಗಲಿದೆ ಅನ್ನೋದು ಗೊತ್ತಾಗಲಿದೆ. ಇತ್ತ ಸೋಮವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ಸಂಪುಟ ಪ್ರತಿಜ್ಞಾವಿಧಿ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಸಿದ್ದರಾಮಯ್ಯರನ್ನ ಹಾಡಿಹೊಗಳಿದ ಡಿ.ಕೆ
ಡಿ.ಕೆ ಶಿವಕುಮಾರ್ ಅವರ ಬಹುದಿನಗಳ ಕನಸು ನನಸಾಗುವ ಕಾಲ ಸಮೀಪದಲ್ಲಿದ್ದು, ಕೆಲವೇ ದಿನಗಳಲ್ಲಿ ಸಿಎಂ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಏರಲಿದ್ದಾರೆ. ಇತ್ತ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಆದ ಬಳಿಕ ಡಿ.ಕೆ ಶಿವಕುಮಾರ್ ಎಕ್ಸ್ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ನಮ್ಮ ಸಿದ್ದರಾಮಯ್ಯನವರು ಅಂತಾ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗುವ ವಿಶೇಷ ವಿಡಿಯೋ ಜೊತೆಗೆ ಭಾವುಕ ಸಂದೇಶವೊಂದನ್ನ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಮೂರು ದಿನಗಳ ಬಳಿಕ ಮೌನ ಮುರಿದ DK Shivakumar..!!

ಎಕ್ಸ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಡಿಕೆಶಿ
ಅಲ್ದೇ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ನನ್ನ ಭಾಗ್ಯ. ಮುಂದಿನ ದಿನಗಳಲ್ಲೂ ರಾಜ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಪಕ್ಷದ ಬಲವರ್ಧನೆಗೆ ಅವರ ಮಾರ್ಗದರ್ಶನ, ಹಿರಿಯ ಅನುಭವ ನಮಗೆ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಕರ್ನಾಟಕದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ನಡೆಯೋಣ ಎಂದು ಪೋಸ್ಟ್ ಮೂಲಕ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ.

ಇದನ್ನು ನೋಡಿ : ಮಂತ್ರಿಗಿರಿ ರೇಸ್ನಲ್ಲಿ ತುಮಕೂರಿನ 7 ಮಂದಿ ಶಾಸಕರು.. – ಸಂಪುಟದಲ್ಲಿ ಯಾರಿಗೆ ಒಲಿಯುತ್ತೆ ಮಂತ್ರಿ ಪಟ್ಟ..?




