ಎರಡನೇ ಕ್ಯಾಬಿನೆಟ್ ಸಭೆ ನಡೆಸಿದ ಸಿಎಂ DK , ಹಲವು ಮಹತ್ವದ ಘೋಷಣೆ!

ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆಯಾದ ಬಳಿಕ ಇಂದು ಎರಡನೇ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನ ಕೈಗೊಂಡಿದ್ದಾರೆ.
`ಪ್ರಜಾ ಸೇವೆ’ ಇಲಾಖೆ ಸ್ಥಾಪನೆ
ಪ್ರಮುಖವಾಗಿ ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಹೊಸ ಪ್ರಜಾಸೇವೆ ಇಲಾಖೆಯಲ್ಲಿ ಪ್ರತ್ಯೇಕ ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಇರಲಿದ್ದು, ಜನರ ಸಮಸ್ಯೆಗಳನ್ನ ಇತ್ಯರ್ಥ ಪಡಿಸಲು ಹೊಸ ಪ್ರಜಾಸೇವೆ ಇಲಾಖೆ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈ ಇಲಾಖೆಯಡಿ 224 ಕ್ಷೇತ್ರಗಳಲ್ಲಿ ಎಲ್ಲಾ ಸಚಿವರು ಸ್ಥಳೀಯ ಶಾಸಕರ ಜೊತೆ ವಾರಕ್ಕೊಮ್ಮೆ ಸಭೆ ನಡೆಸಿ ಜನರ ಸಮಸ್ಯೆಯನ್ನ ಇತ್ಯರ್ಥಿಪಡಿಸಬೇಕೆಂದು ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ
ಇನ್ನೂ ಬೆಂಗಳೂರು ನಗರದ ವೈದ್ಯಕೀಯ ಕಾಲೇಜಿನಲ್ಲಿ ಉಪಕರಣ ಖರೀದಿಗೆ 60 ಕೋಟಿ ರೂ ಆಡಳಿತಾತ್ಮಕ ಅನುಮೋದನೆಯನ್ನ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಬಳ್ಳಾರಿಯ ಸಂಡೂರಿನಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವುದು. 235 ಕೋಟಿ ರೂ ವೆಚ್ಚದಲ್ಲಿ 620 ಬಸ್ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ವೇಳೆ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಬೇಡಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿಎಂ DK ಶಿವಕುಮಾರ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು. ರಾಜ್ಯದ ಹಿತಕ್ಕಾಗಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನು ಓದಿ : ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು `ಪ್ರಜಾ ಸೇವೆ’ ಇಲಾಖೆ ಸ್ಥಾಪನೆ – DK Shivakumar..!!

ಕರ್ನಾಟಕ ಭವನಕ್ಕೆ ಭರ್ಜರಿ ಅನುಮೋದನೆ!
ದೆಹಲಿಯ ಕರ್ನಾಟಕ ಭವನ ನಿರ್ಮಾಣ ಕೆಲಸ ಸಮರ್ಪಕವಾಗಿಲ್ಲ, ಹೀಗಾಗಿ ಕಟ್ಟಡ ನವೀಕರಣ ಮಾಡೋದಕ್ಕೆ ಚಿಂತನೆ ನಡೆಸಿದ್ದೇವೆ. ಹೊಸ ತಂಡವನ್ನು ನಿಯೋಜನೆ ಮಾಡಬೇಕಿದೆ. ಐದಾರು ಹಿರಿಯ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ನೀಡುತ್ತೇವೆ ಎಂದರು. ರಾಜ್ಯದ ಅನೇಕ ಯೋಜನೆಗಳ ಕೆಲಸ ಕೇಂದ್ರದಲ್ಲಿ ಆಗಬೇಕಿದೆ. ದೆಹಲಿಯ ಲೀಗಲ್ ಸೆಲ್ ಕೂಡ ರೀಸ್ಟ್ರಕ್ಚರ್ ಮಾಡಲಿದ್ದೇವೆ ಎಂದರು. ಯುಪಿಎಸ್ಸಿ ಓದುವ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ನಾಲ್ಕನೇ ಕರ್ನಾಟಕ ಭವನ ನಿರ್ಮಾಣ ಮಾಡುತ್ತೇವೆ. ಕಟ್ಟಡ ನಿರ್ಮಾಣಕ್ಕೆ 80 ಕೋಟಿ ರೂ ಹಣ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

DK ಸಚಿವ ಸಂಪುಟದ ಮಹತ್ವದ ನಿರ್ಧಾರಗಳು!
ಕರ್ನಾಟಕ ಭವನದಲ್ಲಿ 50% ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಅವಕಾಶ ಕೊಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ವಸತಿ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕಕ್ಕೆ ಒಸಿ, ಸಿಸಿ ವಿಚಾರವಾಗಿ ಮಾತನಾಡಿದ ಅವರು, ಪೂರ್ಣಗೊಂಡಿರುವ ಹಳೆಯ ಕಟ್ಟಡ, ತಾತ್ಕಾಲಿಕ ವಿದ್ಯುತ್ ಸಂಪರ್ಕವಿದ್ದವರಿಗೆ ನೀರು ಹಾಗೂ ವಿದ್ಯುತ್ ಕೊಡಲಿದ್ದೇವೆ. ಖಾಲಿ ಇರುವ ನಿವೇಶನಕ್ಕೆ ಒಸಿ, ಸಿಸಿ ಕೊಡಲು ಸಾಧ್ಯವಿಲ್ಲ. ಸರ್ಕಾರದ ಆದೇಶ ಆದ ದಿನದಿಂದ 15 ದಿನ ಹೆಚ್ಚುವರಿ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.
ಇದನ್ನು ನೋಡಿ : ಅಪರಿಚಿತ ವಾಹನದಿಂದ ಹಿಟ್ ಅಂಡ್ ರನ್ ಕೆಲಸ ಮುಗಿಸಿ ತೆರಳುತ್ತಿದ್ದವರು ಮಸಣಕ್ಕೆ




