Chitradurga : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಬಾವನನ್ನೇ ಕೊಲೆ; ನಾದಿನಿ ಸೇರಿ ನಾಲ್ವರು ಅರೆಸ್ಟ್!

Chitradurga ಜಿಲ್ಲೆಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಸ್ವಂತ ಬಾವನನ್ನೇ ನಾದಿನಿ ತನ್ನ ಪ್ರಿಯಕರ ಹಾಗೂ ಇತರರ ಸಹಚಾರರೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಬಾವನನ್ನೇ ಕೊಲೆ
ಮೃತರನ್ನು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ 49 ವರ್ಷದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಅವರು ಪಾವಗಡದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ರಜೆ ದಿನಗಳಲ್ಲಿ ಕಾರು ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಕೊಲೆ ಮಾಡಲು ಸಂಚು
ಶಿವಮೂರ್ತಿ ಅವರ ಸಹೋದರನ ಪತ್ನಿ ಸುಮತಿ ಹಾಗೂ ನೂರ್ ಅಹ್ಮದ್ ಎಂಬುವವರ ನಡುವೆ ಅಕ್ರಮ ಸಂಬಂಧವಿತ್ತು. ಈ ಸಂಬಂಧವನ್ನು ಶಿವಮೂರ್ತಿ ವಿರೋಧಿಸುತ್ತಿದ್ದ ಹಿನ್ನೆಲೆ ಅವರನ್ನು ಹತ್ಯೆ ಮಾಡಲು ಆರೋಪಿಗಳು ಪೂರ್ವನಿಯೋಜಿತ ಸಂಚು ರೂಪಿಸಿದ್ದರು.
ಇದನ್ನು ಓದಿ : ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕ ಕಡೆ ಕೊಚ್ಚಿ ರೌಡಿಶೀಟರ್ನ ಕೊಲೆ

ಕತ್ತು ಕೊಯ್ದು ಬರ್ಬರವಾಗಿ ಕೊಲೆ
ಜೂನ್ 26ರಂದು ಆರೋಪಿಗಳು ಶಿವಮೂರ್ತಿ ಅವರಿಗೆ ಕಾರು ಬಾಡಿಗೆ ಇದೆ ಎಂದು ಸುಳ್ಳು ಹೇಳಿ ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಬಂದ ಶಿವಮೂರ್ತಿ ಅವರ ಕತ್ತನ್ನು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಆರೋಪಿಗಳು, ಸಾಕ್ಷ್ಯವನ್ನು ಸಂಪೂರ್ಣವಾಗಿ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಗ್ರಾಮದ ಸಮೀಪಕ್ಕೆ ತಂದು, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ!
ಜುಲೈ 1ರಂದು ಇಂಗಳದಾಳ್ ಗ್ರಾಮದ ಬಳಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ವಿಶ್ಲೇಷಣೆ ಹಾಗೂ ವಿವಿಧ ಸುಳಿವುಗಳ ಆಧಾರದ ಮೇಲೆ ಮೃತದೇಹ ಶಿವಮೂರ್ತಿಯದ್ದೇ ಎಂಬುದು ದೃಢಪಟ್ಟಿತು. ಬಳಿಕ ಕುಟುಂಬ ಸದಸ್ಯರ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸಂಪೂರ್ಣ ಸಂಚು ಬೆಳಕಿಗೆ ಬಂದಿದೆ.

ನಾದಿನಿ ಸೇರಿ ನಾಲ್ವರು ಅರೆಸ್ಟ್!
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಾದಿನಿ ಸುಮತಿ, ಆಕೆಯ ಪ್ರಿಯಕರ ನೂರ್ ಅಹ್ಮದ್, ಅಕ್ಷಯ್ ಹಾಗೂ ಜೇಂಕಾರ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ನೋಡಿ : ಮಸೀದಿ, ಕಲ್ಯಾಣಮಂಟಪದಲ್ಲಿ SIRಗೆ ಅವಕಾಶವಿಲ್ಲ – BLOಗಳಿಗೆ ಮುಖ್ಯ ಚುನಾವಣಾಧಿಕಾರಿ ವಾರ್ನಿಂಗ್




