ಖಾಕಿ ನಿರ್ಲಕ್ಷ್ಯದಿಂದ 66 ಮಂದಿ ರೌಡಿಗಳಿಗೆ ಗುಡ್ ನ್ಯೂಸ್.

ಪೊಲೀಸ್ ಇಲಾಖೆಯ ಎಡವಟ್ಟಿನಿಂದ 66 ಮಂದಿ ರೌಡಿಶೀಟರ್ಗಳು ರೌಡಿಪಟ್ಟಿಯಿಂದ ಹೊರಬಂದಿರುವ ಪ್ರಕರಣ ಬಾರಿ ಚರ್ಚೆಗೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಗಳ ದಾಖಲೆಗಳ ನಿರ್ವಹಣೆಯಲ್ಲಿನ ಲೋಪ ಹಾಗೂ ಹೈಕೋರ್ಟ್ ಮಾರ್ಗಸೂಚಿಗಳ ಪಾಲನೆಯಲ್ಲಿ ಉಂಟಾದ ವೈಫಲ್ಯವೇ ಈ ಬೆಳವಣಿಗೆಗೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.
2022ರಲ್ಲಿ ಹೈಕೋರ್ಟ್ ಮಾರ್ಗಸೂಚಿ
ಮಾಹಿತಿಯ ಪ್ರಕಾರ, 2022ರಲ್ಲಿ ಕರ್ನಾಟಕ ಹೈಕೋರ್ಟ್ ರೌಡಿಪಟ್ಟಿ ತೆರೆಯುವ ಹಾಗೂ ಮುಕ್ತಾಯಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ರೌಡಿಶೀಟರ್ಗಳ ವಿರುದ್ಧದ ಚಟುವಟಿಕೆಗಳು, ಅಪರಾಧ ಹಿನ್ನೆಲೆ, ಇತ್ತೀಚಿನ ವರ್ತನೆ ಸೇರಿದಂತೆ ಹಲವು ಅಂಶಗಳನ್ನು ದಾಖಲಾತಿಗಳ ಮೂಲಕ ಸಮರ್ಪಿಸಬೇಕೆಂದು ಸೂಚಿಸಿತ್ತು. ಆದರೆ ಹಲವು ಪೊಲೀಸ್ ಠಾಣೆಗಳು ಮತ್ತು ಅಧಿಕಾರಿಗಳು ಈ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಇದೀಗ ಬೆಳಕಿಗೆ ಬಂದಿದೆ.

66 ಮಂದಿ ರೌಡಿಶೀಟರ್ಗಳನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಆದೇಶ
ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ಪ್ರಾಧಿಕಾರ ಪರಿಶೀಲನೆ ನಡೆಸಿದ್ದು, ಪೊಲೀಸರು ಸೂಕ್ತ ದಾಖಲೆಗಳು ಮತ್ತು ಸಮರ್ಪಕ ಕಾರಣಗಳನ್ನು ಒದಗಿಸದ ಕಾರಣ 66 ಮಂದಿ ರೌಡಿಶೀಟರ್ಗಳನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಆದೇಶ ನೀಡಿದೆ. ರೌಡಿಪಟ್ಟಿಯಿಂದ ಹೊರಬಂದವರ ಪೈಕಿ ಕುಖ್ಯಾತ ರೌಡಿಶೀಟರ್ಗಳಾದ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ ಹಾಗೂ ರೋಹಿತ್ ಅಲಿಯಾಸ್ ಒಂಟೆ ರೋಹಿತ ಸೇರಿದಂತೆ ಹಲವು ಹೆಸರುಗಳು ಸೇರಿವೆ ಎನ್ನಲಾಗಿದೆ. ವಿಶೇಷವಾಗಿ ಸೈಲೆಂಟ್ ಸುನಿಲ ಕಳೆದ ಹಲವು ವರ್ಷಗಳಿಂದ ತನ್ನ ಹೆಸರನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ನೂರಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದ ಎನ್ನಲಾಗಿದೆ.
ಇದನ್ನು ಓದಿ : ರೌಡಿಶೀಟರ್ ಹತ್ಯೆ ಕೇಸ್ – ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ CM ಸೂಚನೆ
ಈ ಮನವಿಗಳ ಪರಿಶೀಲನೆ ನಡೆಸಿದ ಪ್ರಾಧಿಕಾರವು ಮೇ 19ರಂದು ನಡೆದ ಸಭೆಯಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಿಂದ ಸೈಲೆಂಟ್ ಸುನಿಲನ ಹೆಸರನ್ನು ಕೈಬಿಡುವಂತೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.ಈ ಬೆಳವಣಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಕಡೆ ರಾಜ್ಯ ಸರ್ಕಾರ ರೌಡಿಸಂ ಮಟ್ಟಹಾಕಲು ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಾದ್ಯಂತ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ತಾಲೂಕು ಹಾಗೂ ಪೊಲೀಸ್ ಠಾಣೆ ಮಟ್ಟದಲ್ಲಿಯೂ ರೌಡಿನಿಗ್ರಹ ಪಡೆಗಳನ್ನು ರಚಿಸುವಂತೆ ನಿರ್ದೇಶನ ನೀಡಲಾಗಿತ್ತು.

ಖಾಕಿ ನಿರ್ಲಕ್ಷ್ಯದಿಂದ 66 ಮಂದಿ ರೌಡಿಗಳಿಗೆ ಬಿಗ್ ರಿಲೀಫ್
ಇದಕ್ಕೂ ಮುನ್ನ ವಾರದ ಹಿಂದಷ್ಟೇ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದರು. ಆದರೆ ಆ ಸಭೆಯ ಬೆನ್ನಲ್ಲೇ 66 ಮಂದಿ ರೌಡಿಶೀಟರ್ಗಳು ರೌಡಿಪಟ್ಟಿಯಿಂದ ಹೊರಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನೊಂದೆಡೆ, ರಾಜ್ಯದಲ್ಲಿ ರೌಡಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕುಖ್ಯಾತ ರೌಡಿಶೀಟರ್ಗಳೇ ರೌಡಿಪಟ್ಟಿಯಿಂದ ಹೊರಬಂದಿರುವುದು ಪೊಲೀಸ್ ಇಲಾಖೆಯ ದಾಖಲೆ ನಿರ್ವಹಣೆ ಹಾಗೂ ಕಾನೂನು ಪ್ರಕ್ರಿಯೆಯ ಅನುಷ್ಠಾನದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಪೊಲೀಸ್ ದೂರು ಪ್ರಾಧಿಕಾರದ ಈ ಆದೇಶದಿಂದ ರೌಡಿಶೀಟರ್ಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದ್ದು, ಪೊಲೀಸ್ ಇಲಾಖೆಗೆ ಇದು ತೀವ್ರ ಮುಖಭಂಗ ಉಂಟುಮಾಡಿದೆ ಎನ್ನಲಾಗಿದೆ.
ಇದನ್ನು ನೋಡಿ : ESHWAR KHANDRE ವಿರುದ್ಧ BHAGAWANTH KHUBA ವಾಗ್ದಾಳಿ – ಅಪ್ಪ ಮಗನನ್ನ ಕಳ್ಳರು ಎಂದರಾ ಖೂಬಾ..?




