ಸರ್ಕಾರಿ ಶಾಲೆಗಳ ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಇನ್ನು ಮುಂದೆ ಸಿಗಲಿದೆ ಮೊಟ್ಟೆ, ಹಾಲು, ಬಾಳೆಹಣ್ಣು.

Bengaluru : ರಾಜ್ಯ ಸರ್ಕಾರವು ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಜಾರಿಗೊಳಿಸಿರುವ ಹೊಸ ಆದೇಶದ ಪ್ರಕಾರ, ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿಯೂ ಈಗಿನಿಂದ ಮಧ್ಯಾಹ್ನದ ಭೋಜನ, ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಹಾಗೂ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲಾಗುತ್ತದೆ. ಈ ನಿಯಮ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಇದುವರೆಗೆ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಈಗ ಇದು ಪೂರ್ವ ಪ್ರಾಥಮಿಕ ಮಕ್ಕಳಿಗೂ ವಿಸ್ತರಿಸಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ 1,98,270ಕ್ಕೂ ಹೆಚ್ಚು ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವೆಚ್ಚದ ಹಂಚಿಕೆ
- ಪ್ರತಿ ವಿದ್ಯಾರ್ಥಿಗೆ ಮಧ್ಯಾಹ್ನದ ಊಟ ತಯಾರಿಕಾ ವೆಚ್ಚ — ₹6.78
- ಕೇಂದ್ರ ಸರ್ಕಾರ: ₹4.07
- ರಾಜ್ಯ ಸರ್ಕಾರ: ₹2.71
- ಕ್ಷೀರ ಭಾಗ್ಯ ಯೋಜನೆ, ಮೊಟ್ಟೆ ಮತ್ತು ಬಾಳೆಹಣ್ಣುಗಳ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
ಇದನ್ನು ಓದಿ : ಮುದ್ದಿನ ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ

ಆಹಾರದ ಗುಣಮಟ್ಟಕ್ಕೆ ವಿಶೇಷ ಸೂಚನೆ
ಎಲ್ಲಾ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸಮರ್ಪಕ, ಸ್ವಚ್ಛ ಮತ್ತು ಆರೋಗ್ಯಕರ ಆಹಾರ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ. ಕಾಲಾನುಗುಣವಾಗಿ ಪರಿಶೀಲನೆ ನಡೆಸಿ ಗುಣಮಟ್ಟವನ್ನು ಕಾಪಾಡಬೇಕೆಂದು ಶಾಲೆಗಳಿಗೆ ನಿರ್ದೇಶಿಸಲಾಗಿದೆ.
ಡಿಜಿಟಲ್ ದಾಖಲೆಗಳ ಏಕೀಕರಣ
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಂತೆ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ವಿವರಗಳನ್ನೂ SATS ಸಾಫ್ಟ್ವೇರ್ಗೆ ಅಪ್ಲೋಡ್ ಮಾಡುವಂತೆ ಆದೇಶಿಸಲಾಗಿದೆ.
ಹೊಸ ಪೂರ್ವ ಪ್ರಾಥಮಿಕ ಶಾಲೆಗಳು
ರಾಜ್ಯಾದ್ಯಂತ 5,000 ಹೊಸ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ಧಾರದಿಂದ ಸರ್ಕಾರಿ ಶಾಲೆಗಳಲ್ಲಿನ ಪುಟ್ಟಮಕ್ಕಳ ಪೌಷ್ಟಿಕತೆ ಹಾಗೂ ಶಾಲಾ ಹಾಜರಾತಿ ಹೆಚ್ಚುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

ಇದನ್ನು ನೋಡಿ : TUMAKURU | ಕೃಷಿ ಇಲಾಖೆ ಮುತ್ತಿಗೆಗೆ ಬಿಜೆಪಿ ಪ್ಲಾನ್..ಇಲಾಖೆಯ ಸುತ್ತ ಹೇಗಿದೆ ಗೊತ್ತಾ ಭದ್ರತೆ




