Bengaluru | ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಲಕ್ಷಾಂತರ ರೂ. ದರೋಡೆ – ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಸೇರಿ 12 ಮಂದಿ ಅರೆಸ್ಟ್

ಡಿಜಿಟಲ್ ಕ್ರಿಪ್ಟೋ ಕರೆನ್ಸಿಗೆ ಹಣ ಪರಿವರ್ತನೆ ಮಾಡಿಕೊಡುವುದಾಗಿ ನಂಬಿಸಿ 17 ಲಕ್ಷ 64 ಸಾವಿರ ರೂಪಾಯಿ ದರೋಡೆ ಮಾಡಿದ್ದ ಪ್ರಕರಣವನ್ನು ಬೆಂಗಳೂರಿನ ಸಂಜಯನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಮೂಲದ ಇಬ್ಬರು ವಿದ್ಯಾರ್ಥಿಗಳು, ಡಿ.ಜೆ.ಹಳ್ಳಿ ರೌಡಿಶೀಟರ್ ಸೇರಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂಪಾಯಿ ನಗದು, ವಾಹನಗಳು ಹಾಗೂ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಬರೋಬ್ಬರಿ 17.6 ಲಕ್ಷ ದೋಚಿದ್ದ ಖದೀಮರ ಗ್ಯಾಂಗ್
ಸಾಫ್ಟ್ವೇರ್ ಉದ್ಯೋಗಿಯಾಗಿರುವ ವಿಶ್ವಾಸ್ ಅವರು ಕ್ರಿಪ್ಟೋ ಕರೆನ್ಸಿಗೆ 17.64 ಲಕ್ಷ ರೂಪಾಯಿ ಎಕ್ಸ್ಚೇಂಜ್ ಮಾಡಿಕೊಡುವಂತೆ ಜೂನ್ 9ರಂದು ವಾಟ್ಸಾಪ್ ಗ್ರೂಪ್ ಮೂಲಕ ಆರೋಪಿಗಳನ್ನು ಸಂಪರ್ಕಿಸಿದ್ದರು.
ಹೀಗಾಗಿ ಜೂನ್. 9ರಂದು ರಾತ್ರಿ ಸಂಜಯನಗರದ ಕಲ್ಪನಾ ಚಾವ್ಲಾ ರಸ್ತೆಗೆ ಹಣದೊಂದಿಗೆ ಬರಲು ಆರೋಪಿಗಳು ಸೂಚಿಸಿದ್ದರು.
ಅದರಂತೆ ವಿಶ್ವಾಸ್ ತನ್ನ ಸ್ನೇಹಿತನೊಂಧಿಗೆ ಹೋಗಿದ್ದಾಗ, ಆರೋಪಿಗಳು ವಿಶ್ವಾಸ್ ಹಾಗೂ ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, 17.64 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು.
ಇದನ್ನು ಓದಿ : ವೃದ್ಧೆಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 24 ಕೋಟಿ ವಂಚನೆ!

ಸಂಜಯನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಈ ಸಂಬಂಧ ವಿಶ್ವಾಸ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ, ಮೊಬೈಲ್ ಕರೆಗಳ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಡಿ.ಜೆ.ಹಳ್ಳಿಯ ಕರೀಂ ಖಾನ್, ವಾಸೀಂ ಖಾನ್, ಮೊಹಮ್ಮದ್ ಇಸ್ಮಾಯಿಲ್, ರೆಹಾನ್, ಸುಹೇಬ್ ಜಾವಿದ್, ಅಯನ್ ಮುಖರ್ಜಿ, ಅಖೀಲ್ ಮೊಹಮ್ಮದ್, ತೌಸಿಫ್, ಇಲಿಯಾತ್ ಷರೀಫ್, ಅಫ್ಜಲ್ ಖಾನ್, ಜಮ್ಮು-ಕಾಶ್ಮೀರದ ಮುಜಾಮಿಲ್ ಹಾಗೂ ಇಮ್ರಾನ್ ಪಾಷ ಎನ್ನಲಾಗಿದ್ದು, ಆರೋಪಿಗಳಿಂದ 13.90 ಲಕ್ಷ ರು ನಗದು, 6 ಬೈಕ್ಗಳು, ಕಾರು ಹಾಗೂ 13 ಮೊಬೈಲ್ ಜಪ್ತಿ ಮಾಡಲಾಗಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ
ಇನ್ನು ಬಂಧಿತ ಡಿ.ಜೆ.ಹಳ್ಳಿ ರೌಡಿಶೀಟರ್ ವಸೀಂ ಖಾನ್ ವಿರುದ್ಧ ಈಗಾಗಲೇ 13ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಅಲ್ಲದೇ ಲಿಯಾಕತ್ ಷರೀಫ್, ರೆಹಾನ್ ಹಾಗೂ ಕರೀಂ ಖಾನ್ ವಿರುದ್ಧವೂ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : Balaramana Dinagalu Movie Release – ತುಮಕೂರಿನಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್




