Belagavi News : ರಾಣಿ ಚೆನ್ನಮ್ಮ ವಿವಿಯ ಪಿಎಚ್ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸಭೆಯಲ್ಲಿ ಎರಡು ಮಹತ್ವದ ತೀರ್ಮಾನ. ವಿದ್ಯಾರ್ಥಿನಿಗೆ ಪಿಎಚ್ಡಿ ಪದವಿ ಪ್ರದಾನಕ್ಕೆ ಹಸಿರು ನಿಶಾನೆ

Belagavi News : ಪಿಎಚ್ಡಿ ಪದವಿ ನೀಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಡಿಸೆಂಬರ್ 1ರಂದು 19ಕ್ಕೂ ಹೆಚ್ಚು ಮಾತ್ರೆಗಳು ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಬಳಿಕ ಘಟನೆ ಗಂಭೀರ ತಿರುವು ಪಡೆದುಕೊಂಡಿತು. ಈ ವಿಚಾರವನ್ನು ಚರ್ಚಿಸಲು ವಿಶೇಷ ಸಿಂಡಿಕೇಟ್ ಸಭೆ ಕರೆದಿದ್ದು, ಎರಡು ಮುಖ್ಯ ನಿರ್ಧಾರಗಳನ್ನು ಘೋಷಿಸಲಾಗಿದೆ.
ಸಭೆಯಲ್ಲಿ ವಿದ್ಯಾರ್ಥಿನಿ ಪಿಎಚ್ಡಿ ಪದವಿಗೆ ಅರ್ಹರು ಎಂಬುದನ್ನು ಸ್ಪಷ್ಟಪಡಿಸಲಾಗಿದ್ದು, ನಿಯಮಾನುಸಾರ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಪದವಿ ಪ್ರದಾನ ಮಾಡಲಾಗುವುದಾಗಿ ಕುಲಪತಿ ಸಿ.ಎಂ. ತ್ಯಾಗರಾಜ್ ತಿಳಿಸಿದ್ದಾರೆ.
Must READ : ಇದನ್ನು ಓದಿ : ATM ಮಷಿನ್ನನ್ನೇ ಎಗರಿಸಲು ಯತ್ನಿಸಿದ ಐನಾತಿ ಕಳ್ಳರು
ಇದೇ ವೇಳೆ, ವಿದ್ಯಾರ್ಥಿನಿ ದುರುಪಯೋಗ ಮತ್ತು ಕಿರುಕುಳದ ಆರೋಪ ಮಾಡಿದ ಗೈಡ್ ಪ್ರಾಧ್ಯಾಪಕ ಕೆ.ಎಲ್.ಎನ್. ಮೂರ್ತಿಗೆ ಕಡ್ಡಾಯ ನಿವೃತ್ತಿ ನೀಡುವ ತೀರ್ಮಾನಕ್ಕೂ ಸಿಂಡಿಕೇಟ್ ಒಪ್ಪಿಗೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳುವ ನಿಯಮಾವಳಿ ಉಲ್ಲಂಘನೆಯೇ ಈ ನಿರ್ಧಾರಕ್ಕೆ ಕಾರಣವೆಂದು ವಿವಿ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿನಿ 2021ರಲ್ಲಿ ಇತಿಹಾಸ ವಿಭಾಗದಲ್ಲಿ ಸಂಶೋಧನೆ ಆರಂಭಿಸಿದ್ದು, 2025ರಲ್ಲಿ ಕೆಲಸ ಪೂರ್ಣಗೊಂಡಿತ್ತು. ಪ್ರಾಧ್ಯಾಪಕ ಮೂರ್ತಿಯ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದರೂ, ನಂತರ ದೂರು ಹಿಂತೆಗೆದುಕೊಳ್ಳಲಾಗಿತ್ತು. ಆದಾಗ್ಯೂ ಪದವಿ ಪ್ರದಾನ ಕುರಿತ ತೀರ್ಮಾನ ವಿಳಂಬವಾದ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಹೊರಬಿದ್ದಿತ್ತು.
ಘಟನೆ ಬಳಿಕ ತುರ್ತು ಸಿಂಡಿಕೇಟ್ ಸಭೆ ಕರೆದ ವಿವಿ ಆಡಳಿತ, ಪದವಿ ಪ್ರದಾನ ಮತ್ತು ಪ್ರಾಧ್ಯಾಪಕರ ವಿರುದ್ಧದ ಕ್ರಮ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿದೆ.
ಇದನ್ನು ನೋಡಿ : ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್..!

