
BENGALURU : ಬೆಂಗಳೂರಿನಿಂದ 18 ತಿಂಗಳು ಬಳ್ಳಾರಿ ರಸ್ತೆ ಬಂದ್! ಯಾಕೆ?
ಸಿಲಿಕಾನ್ ಸಿಟಿ ಬೆಂಗಳೂರಿನ ವಾಹನ ಸವಾರರೇ ಗಮನಿಸಿ. ಇಂದಿನಿಂದ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ನಿಂದ ಮೇಖ್ರಿ ಸರ್ಕಲ್ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಬರೋಬ್ಬರಿ 18 ತಿಂಗಳ ಕಾಲ ನಡೆಯಲಿದ್ದು, ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ನಡುವಿನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಏರ್ಪೋರ್ಟ್ಗೆ ತೆರಳುವವರು ಸೇರಿದಂತೆ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಮೇಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗೆ ಸಂಚಾರ ಬಂದ್
ಹೌದು.. ನವೆಂಬರ್ 6ರಿಂದ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭವಾಗಿದೆ. ಬೃಹತ್ ಕಾಮಗಾರಿಯಿಂದಾಗಿ ಮೇಖ್ರಿ ಸರ್ಕಲ್ನಿಂದ ಹೆಬ್ಬಾಳದವರೆಗಿನ ಪ್ರಮುಖ ರಸ್ತೆಯನ್ನು ಮುಚ್ಚಲಾಗಿದೆ. ಸದ್ಯ ಸರ್ವಿಸ್ ರಸ್ತೆಯಲ್ಲಿ ಮಾತ್ರ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸದಾಶಿವನಗರ ಮತ್ತು ಸಂಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಸಂಚಾರ ಬದಲಾವಣೆ ಜಾರಿಯಲ್ಲಿರಲಿದೆ.
KSRTC ಮತ್ತು ಖಾಸಗಿ ಬಸ್ಗಳಿಗೂ ಸಂಚಾರಕ್ಕೆ ನಿರ್ಬಂಧ
ಇನ್ನು ಬಳ್ಳಾರಿ ರಸ್ತೆಯಲ್ಲಿ ಹಗುರ, ಮಧ್ಯಮ ಹಾಗೂ ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.
ಹೀಗಾಗಿ ಈ ಮಾರ್ಗವನ್ನು ಅವಲಂಬಿಸಿರುವ ವಾಹನ ಸವಾರರು ಹಾಗೂ ಪ್ರಯಾಣಿಕರು ಪರ್ಯಾಯ ರಸ್ತೆಗಳನ್ನು ಬಳಸಬೇಕಿದೆ.
READ THIS : ಮೆಜೆಸ್ಟಿಕ್-ಮಲ್ಲೇಶ್ವರ ರಸ್ತೆ 3 ತಿಂಗಳು ಬಂದ್ – ಯಾಕೆ?

ನಗರದಿಂದ ಏರ್ಪೋರ್ಟ್ಗೆ ಪರ್ಯಾಯ ಮಾರ್ಗ
ನಗರದಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು ಓಲ್ಡ್ ಹೈಗ್ರೌಂಡ್ಸ್, ಕ್ಯಾಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ಮಾರ್ಗ ಬಳಸಬಹುದು.
ಮತ್ತೊಂದು ಆಯ್ಕೆಯಾಗಿ ಯಶವಂತಪುರದಿಂದ ಬೆಲ್ ಸರ್ಕಲ್ ಮೂಲಕ ಔಟರ್ ರಿಂಗ್ ರಸ್ತೆ ಮಾರ್ಗವಾಗಿ ಸಂಚರಿಸಬಹುದು.
ಇನ್ನು ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡತಿರುವು ಪಡೆದು ನಾಗವಾರ ಹಾಗೂ ಕ್ವೀನ್ಸ್ ರಸ್ತೆ ಮಾರ್ಗವಾಗಿ ಬರಬಹುದು.
ಅಥವಾ ಹೆಬ್ಬಾಳ ರಿಂಗ್ ರಸ್ತೆ, ಗೊರಗುಂಟೆಪಾಳ್ಯ ಹಾಗೂ ಡಾ. ರಾಜ್ಕುಮಾರ್ ರಸ್ತೆ ಮೂಲಕ ನಗರ ಪ್ರವೇಶಿಸಬಹುದು ಎಂದು ಸೂಚಿಸಲಾಗಿದೆ.
ಆನಂದನಗರ, ಆರ್.ಟಿ. ನಗರಕ್ಕೆ ತೆರಳುವವರಿಗೆ ಸೂಚನೆ
ಸ್ಥಳೀಯವಾಗಿ ಆನಂದನಗರ ಹಾಗೂ ಆರ್.ಟಿ. ನಗರ ಕಡೆಗೆ ತೆರಳುವವರು ಬ್ಯಾಪ್ಟಿಸ್ಟ್ ಆಸ್ಪತ್ರೆ ಸರ್ವಿಸ್ ರಸ್ತೆ ಮತ್ತು ಸಿಬಿಐ ಜಂಕ್ಷನ್ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಏರ್ಪೋರ್ಟ್ ಪ್ರಯಾಣಿಕರು 1–2 ಗಂಟೆ ಮುಂಚಿತವಾಗಿ ಹೊರಡಿ
ಇನ್ನು ಏರ್ಪೋರ್ಟ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಕನಿಷ್ಠ ಒಂದರಿಂದ ಎರಡು ಗಂಟೆ ಮುಂಚಿತವಾಗಿ ಆರಂಭಿಸುವುದು ಸೂಕ್ತ ಎಂದು ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ.

MUST WATCH : ರೈತರ ಹೋರಾಟಕ್ಕೆ ಬ್ರೇಕ್.? – ಕಬ್ಬು ಬೆಳೆಗಾರರಿಗೆ CM DKS ಮನವಿ!




