
Smriti Mandhana : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ (INDW vs AUSW), ಭಾರತದ ಮಹಿಳಾ ತಂಡ ತೀವ್ರ ಹೋರಾಟ ನಡೆಸಿದರೂ 43 ರನ್ಗಳ ಅಂತರದಿಂದ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ಬಲಿಷ್ಠ ಆಟವಾಡಿದ ಸ್ಮೃತಿ ಮಂಧಾನ ತಮ್ಮ ಬ್ಯಾಟಿಂಗ್ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಭಾರತವು 412 ರನ್ಗಳ ಭರ್ಜರಿ ಗುರಿ ಬೆನ್ನಟ್ಟುತ್ತಿದ್ದ ವೇಳೆ ಆರಂಭಿಕ ಬ್ಯಾಟರ್ ಮಂಧಾನ, ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಭಾಜನರಾದರು.
ಈ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಹೆಸರಿನಲ್ಲಿ ಇತ್ತು. ಅವರು 2013ರ ಅಕ್ಟೋಬರ್ನಲ್ಲಿಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ಈಗ ಸ್ಮೃತಿ ಮಂಧಾನ 50 ಎಸೆತಗಳಲ್ಲಿ ಶತಕಸಿಡಿಸಿ ಆ ದಾಖಲೆಯನ್ನು ಮುರಿದಿದ್ದಾರೆ. ಪಂದ್ಯದಲ್ಲಿ ಮಂಧಾನ 63 ಎಸೆತಗಳನ್ನು ಎದುರಿಸಿ 125 ರನ್ಗಳಿಸಿದ್ದು, 5 ಸಿಕ್ಸರ್ಗಳು ಮತ್ತು 17 ಬೌಂಡರಿಗಳನ್ನು ಸ್ಮೃತಿ ಸಿಡಿಸಿದರು.
ಭಾರತದ ಸೋಲಿನಲ್ಲೂ ಮಂಧಾನ ಅವರ ಈ ಪ್ರಬಲ ಪ್ರದರ್ಶನ, ತಂಡಕ್ಕೆ ಸ್ಫೂರ್ತಿ ನೀಡಿದ್ದು, ಮುಂದಿನ ಸರಣಿಗಳಿಗೆ ಭರವಸೆ ಮೂಡಿಸಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಶತಕದ ಬಗ್ಗೆ ಯೂ, ದಾಖಲೆ ಮುರಿತದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




