
NEWDELHI: ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಭಾರತೀಯ ಸಿನಿಮಾಕ್ಷೇತ್ರದ ಅತ್ಯುನ್ನತ ಗೌರವವಾದ 2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಪ್ರಯಾಣವನ್ನು ಮಾಡಿದ್ದಾರೆ ಮೋಹನ್ ಲಾಲ್. ಅವರು ಅಭಿನಯಿಸಿದ ಚಿತ್ರಗಳು ಮಾತ್ರವಲ್ಲದೆ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ತೋರಿಸಿದ ಬಹುಮುಖ ಪ್ರತಿಭೆ, ಹಾಗೂ ಸಿನಿಮಾಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಪ್ರತಿಯೊಬ್ಬನಿಗೂ ಸ್ಫೂರ್ತಿದಾಯಕವಾಗಿವೆ ಎಂದು ಕೇಂದ್ರ ಸರಕಾರ ಪ್ರಶಂಸಿಸಿದೆ.
ಮೋಹನ್ ಲಾಲ್ ಅವರ ನಿರಂತರ ಕಠಿಣ ಪರಿಶ್ರಮ, ನಟನೆಗೆ ನಿಷ್ಠೆ ಮತ್ತು ವಿಭಿನ್ನ ಪಾತ್ರಗಳಲ್ಲಿ ತೋರಿದ ನೈಸರ್ಗಿಕ ಅಭಿನಯ ಶೈಲಿ ಭಾರತೀಯ ಸಿನಿಮಾಕ್ಕೆ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಈ ಪ್ರಶಸ್ತಿ ಅವರ ಸುದೀರ್ಘ ಹಾಗೂ ಯಶಸ್ವೀ ಚಲನಚಿತ್ರ ಪ್ರಶಸ್ತಿ ಪದಕವಾಗಿದೆ.




