
ASTROLOGY:
ಪಿತೃಪಕ್ಷವು ವರ್ಷದಲ್ಲಿ ಒಮ್ಮೆ ಬರುವ ಅತ್ಯಂತ ಪವಿತ್ರ ಧಾರ್ಮಿಕ ಅವಧಿ. ಈ ಅವಧಿಯಲ್ಲಿ ಹಿಂದಿನ ಮೂರು ತಲೆಮಾರಿನ ಪಿತೃಗಳನ್ನು ಸ್ಮರಿಸಿ ಶ್ರಾದ್ಧ, ತರ್ಪಣಾದಿ ಆಚರಣೆಗಳನ್ನು ಮಾಡಲಾಗುತ್ತದೆ. ಪಿತೃಗಳ ಸಂತೃಪ್ತಿ ಹಾಗೂ ಮುಂದಿನ ತಲೆಮಾರಿನ ಕ್ಷೇಮಕ್ಕಾಗಿ ಈ ವಿಧಿಗಳು ನೆರವೇರಿಸಲಾಗುತ್ತವೆ. ವಿಶೇಷವಾಗಿ, ಕಾಗೆಗಳಿಗೆ ಆಹಾರ ಅರ್ಪಿಸುವುದು ಇದರ ಪ್ರಮುಖ ಅಂಗವಾಗಿದೆ. ಪಿತೃಪಕ್ಷ ಅಥವಾ ಮಹಾಲಯ ಅಮಾವಾಸ್ಯೆಯ 15 ದಿನಗಳ ಅವಧಿಯಲ್ಲಿ ಹಿಂದುಗಳು ತಮ್ಮ ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

ಜೀವನದಲ್ಲಿ ದೇವ ಋಣ, ಋಷಿ ಋಣ, ಪಿತೃ ಋಣ, ಮಾನವ ಋಣ ಮತ್ತು ಭೂತ ಋಣ ಎಂಬ ಐದು ಪ್ರಮುಖ ಋಣಗಳಿದ್ದು, ಪಿತೃ ಋಣ ತೀರಿಸುವುದು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಪಂಚಾಂಗದ ಪ್ರಕಾರ, ಮೃತ ಪೂರ್ವಜರ ಮರಣ ತಿಥಿಯಂದು ಶ್ರಾದ್ಧ ಮಾಡುವುದು ರೂಢಿಯಾಗಿದೆ. ಮಹಾಲಯ ಅಮಾವಾಸ್ಯೆಯಂದು ಎಲ್ಲ ಪಿತೃಗಳಿಗೆ ಸಾಮೂಹಿಕ ಶ್ರಾದ್ಧ ನಡೆಸಲಾಗುತ್ತದೆ. ಈ ದಿನ ಆಹಾರ, ಹಣ್ಣು, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ಕಾಗೆ, ಹಸು, ನಾಯಿಗಳಿಗೆ ಆಹಾರ ನೀಡಲಾಗುತ್ತದೆ. ಗರುಡಪುರಾಣದ ಪ್ರಕಾರ, ಕಾಗೆ ಯಮಧರ್ಮರಾಜನ ಸಂಕೇತವೆಂದು ಹೇಳಲಾಗಿದ್ದು, ಕಾಗೆ ನೈವೇದ್ಯ ಸೇವಿಸಿದರೆ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ. ಪಿತೃಪಕ್ಷದ ಆಚರಣೆಗಳು ಕುಟುಂಬದ ಕ್ಷೇಮ, ಆರೋಗ್ಯ ಮತ್ತು ಸಮೃದ್ಧಿಗೆ ಕಾರಣವಾಗುತ್ತವೆ. ಈ ಸಂಪ್ರದಾಯ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಭಾಗವಾಗಿದೆ.




