Prajwal Revanna : ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್; ಜೀವಿತಾವಧಿ ಸೆರೆವಾಸ ಶಿಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ

Prajwal Revanna : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ, ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಈಗ ಜಾಮೀನು ಸಿಗುವ ಸಾಧ್ಯತೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಕೆಆರ್ ನಗರ ಮೂಲದ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಆಗಸ್ಟ್ 2 ರಂದು ಜೀವಾವಧಿ ಶಿಕ್ಷೆ ವಿಧಿಸಿ 11.50 ಲಕ್ಷ ರೂ. ದಂಡ ವಿಧಿಸಿತ್ತು. ದಂಡದ 11.25 ಲಕ್ಷ ರೂ. ಅನ್ನು ಸಂತ್ರಸ್ತೆಗೆ ಪಾವತಿಸಲು ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಓದಿ : ನಟ ದರ್ಶನ್ ರಿಂದ ವಶಕ್ಕೆ ಪಡೆದಿದ್ದ 82 ಲಕ್ಷ ರೂ. IT ಇಲಾಖೆಗೆ ನೀಡಲು ಕೋರ್ಟ್ ಆದೇಶ
ಅತ್ಯಾಚಾರ ಪ್ರಕರಣದಲ್ಲೇನಾಗಿತ್ತು?
2021ರಲ್ಲಿ ಹಾಸನದ ಗನ್ನಿಕಾಡ ತೋಟದ ಮನೆಯಲ್ಲಿ, ಹಾಗೆಯೇ ಬೆಂಗಳೂರಿನ ನಿವಾಸದಲ್ಲೂ ಮಹಿಳೆಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆದಿದ್ದು, ಈ ಘಟನೆಗಳನ್ನು ಆರೋಪಿ ತನ್ನ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆಂದು ದೂರು ತಿಳಿಸಿತ್ತು. ಮಹಿಳೆ ನೀಡಿದ ಹೇಳಿಕೆ, ಪತ್ತೆಯಾಗಿದ್ದ ಸಾಕ್ಷ್ಯಗಳು ಹಾಗೂ ವೀಡಿಯೋ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರು ದೋಷಿ ಎಂದು ಘೋಷಿಸಿತ್ತು.
ಪ್ರಜ್ವಲ್ ರೇವಣ್ಣ ಪರ ವಕೀಲರು, ಮಹಿಳೆ ಮೂರು ವರ್ಷಗಳ ಬಳಿಕ ದೂರು ನೀಡಿರುವುದು, ಸಾಕ್ಷ್ಯಗಳಲ್ಲಿ ವ್ಯತ್ಯಾಸ, ಮೊಬೈಲ್ ವಶಪಡಿಸಿಕೊಳ್ಳದಿರುವುದು ಮುಂತಾದ ಅಂಶಗಳನ್ನು ಉಲ್ಲೇಖಿಸಿ ಶಿಕ್ಷೆ ರದ್ದುಪಡಿಸುವಂತೆ ಮನವಿ ಸಲ್ಲಿಸಿದರೂ, ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಮೂಲಕ ಪ್ರಕರಣಕ್ಕೆ ಇನ್ನೊಂದು ತಿರುವು ನೀಡಿದೆ.




