Shivamogga: ನವವಿವಾಹಿತೆಯೊಬ್ಬಳು ವಾಟ್ಸಾಪ್ನಲ್ಲಿ ಡೆತ್ನೋಟ್ ಬರೆದಿಟ್ಟು, ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Shivamogga: ನವವಿವಾಹಿತೆಯೊಬ್ಬಳು ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದಿಟ್ಟು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ನಡೆದಿದೆ.
ಡಿ.ಬಿ.ಹಳ್ಳಿ ಮೂಲದ ಲತಾ (25) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ಏಪ್ರಿಲ್ 14 ರಂದು ಶಿಕಾರಿಪುರ ತಾಲೂಕಿನ ದಿಂಡದಹಳ್ಳಿಯ ಕೆಪಿಟಿಸಿಎಲ್ನಲ್ಲಿ AEE ಆಗಿದ್ದ ಗುರುರಾಜ್ ಜೊತೆ ವಿವಾಹವಾಗಿತ್ತು.
ವರದಕ್ಷಿಣೆಗಾಗಿ ನಿರಂತರ ಕಿರುಕುಳ: ಡೆತ್ ನೋಟ್ನಲ್ಲಿ ಉಲ್ಲೇಖ
ಲತಾ ಸಂಬಂಧಿಕರಿಗೆ ವಾಟ್ಸಾಪ್ ನಲ್ಲಿ ಕಳುಹಿಸಿದ ಡೆತ್ ನೋಟ್ನಲ್ಲಿ, ಯಾರು ಹುಟ್ಟುತ್ತ ಕೆಟ್ಟವರಾಗಿರುವುದಿಲ್ಲ. ಪ್ರತಿ ಹೆಣ್ಣು ಪುಣ್ಯ ಮಾಡಿ ಗಂಡನ ಮನೆಗೆ ಹೋಗುತ್ತಾಳೆ. ಹೊಸ ಮನೆಗೆ ಹೊಂದಿಕೊಳ್ಳಲು ಸಮಯ ಬೇಕು.
ಆ ಸಮಯದಲ್ಲಿ ಮನೆಯ ಉಳಿದವರ ಜೊತೆ ಗಂಡನೂ ದ್ವೇಷಿಸಿದಾಗ ಹೆಣ್ಣು ಬದುಕಿದ್ದೂ ಸತ್ತಂತೆ. ನನ್ನ ಸಾವಿಗೆ ಗುರುರಾಜ್ ಹಾಗೂ ಆ ಐವರೇ ಕಾರಣ, ಅವರಿಗೆ ಶಿಕ್ಷೆಯಾಗಬೇಕು. ಓದುತ್ತಿರುವವರು ನನಗೆ ನ್ಯಾಯ ಕೊಡಿಸಿ ಅಂತಾ ವಾಟ್ಸಾಪ್ನಲ್ಲಿ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ | 11 ತಿಂಗಳ ಕಂದಮ್ಮ ಅನಾಥ
ಮದುವೆಯಲ್ಲಿ 20 ಲಕ್ಷ ವೆಚ್ಚ; ಇನ್ನೋವಾ ಕಾರು ಕೇಳಿದ್ದರೆಂಬ ಆರೋಪ
ಮದುವೆಯಲ್ಲಿ 10 ಲಕ್ಷ ರೂ. ನಗದು, ಚಿನ್ನಾಭರಣ ಪಡೆದಿದ್ದು, ಸರ್ಕಾರಿ ಹುದ್ದೆಗೆ ತಕ್ಕಂತೆ ಇನ್ನೋವಾ ಕಾರು ಕೊಡಬೇಕು ಎಂದು ಪೀಡಿಸುತ್ತಿದ್ದರು ಎಂದು ದೂರಲಾಗಿದೆ. ಕಾರು, ಮನೆ ನೀಡದಿದ್ದರೆ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಭದ್ರಾ ನಾಲೆಯ ಬಳಿ ಬಟ್ಟೆ, ಮೊಬೈಲ್ ಪತ್ತೆ
ಸಂದೇಶ ಕಳುಹಿಸಿದ ನಂತರ ಲತಾ ನಾಪತ್ತೆಯಾಗಿದ್ದು, ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಹೊಳೆಹೊನ್ನೂರು ಪೊಲೀಸರು ಹುಡುಕಾಟ ನಡೆಸಿದ್ದರು.
ಬಳಿಕ ಭದ್ರಾ ನಾಲೆಯ ತಟದಲ್ಲಿ ಲತಾಳ ಬಟ್ಟೆ ಮತ್ತು ಮೊಬೈಲ್ ಪತ್ತೆಯಾಗಿದ್ದು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ.
ಐವರ ವಿರುದ್ಧ FIR
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಗಂಡ ಗುರುರಾಜ್ ಅತ್ತೆ ಶಾರದಮ್ಮ ನಾದಿನಿ ನಾಗರತ್ನಮ್ಮ ರಾಜೇಶ್ವರಿ ನಾಗರತ್ನಮ್ಮನ ಗಂಡ ಕೃಷ್ಣಪ್ಪ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH: ಪ್ರೀತಿಸಿ ಮದುವೆಯಾಗಿದ್ದ ಗಂಡ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಹೆಂಡ್ತಿ




