
BANGALORE : ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹೌದು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ 32 ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಮೇಘಾ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ರಾಜೇಶ್ ಎಂಬುವರನ್ನು ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಈ ದಂಪತಿಗೆ 11 ತಿಂಗಳ ಮಗು ಸಹ ಇದ್ದು, ತಾಯಿ ಕಳೆದುಕೊಂಡು ಮಗು ಅನಾಥವಾಗಿದೆ.ಇನ್ನು ಮಹಿಳೆಯ ಸಾವಿಗೆ ಮೇಘಾಳ ಪತಿ ರಾಜೇಶ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಹೆಗ್ಗನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಕುಟುಂಬದವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

