Fire Accident : ಜಯನಗರದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ.

Fire Accident : ಬೆಂಗಳೂರಿನ ಜಯನಗರದ 4ನೇ ಬ್ಲಾಕ್ನಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಮೇಲ್ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣೋಪಕ್ಷಣ 2, 3, 4 ಮತ್ತು 5ನೇ ಮಹಡಿಗಳಿಗೆ ಹರಡಿತು. ಈ ವೇಳೆ ಇಬ್ಬರು ಜಿಬಿಎ ಸಿಬ್ಬಂದಿಗಳು ಲಿಫ್ಟ್ನಲ್ಲಿ ಸಿಲುಕಿಕೊಂಡು ಸಹಾಯಕ್ಕಾಗಿ ಒದ್ದಾಡಿದರು.
ಪ್ರಸ್ತುತ ಇಬ್ಬರೂ ಸುರಕ್ಷಿತ
ಘಟನೆ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ, ತುರ್ತು ಕಾರ್ಯಾಚರಣೆಯಲ್ಲಿ ಮೊದಲಿಗೆ ಲಿಫ್ಟ್ನಲ್ಲಿ ಸಿಲುಕಿದ ಕೃಷ್ಣೇಗೌಡ ಮತ್ತು ಸಣ್ಣ ನೀರಾವರಿ ಇಲಾಖೆಯ ಉದ್ಯೋಗಿ ಅರುಣ್ ಪ್ರಸಾದ್ ಅವರನ್ನು ರಕ್ಷಿಸಿದರು.
ಇಬ್ಬರಿಗೂ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಪರೀಕ್ಷೆಗಾಗಿ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ
ಅಗ್ನಿ ನಂದಿಸಲು ಅಗ್ನಿಶಾಮಕ ದಳ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು.
ಪ್ರಾಥಮಿಕ ತಪಾಸಣೆಯಲ್ಲಿ ಕಟ್ಟಡದ ಕಚೇರಿಗಳಿಗೆ ಯಾವುದೇ ಗಂಭೀರ ಹಾನಿಯಾಗಿಲ್ಲದರೂ, ವಿದ್ಯುತ್ ಅವಘಡದಿಂದ ಎಲೆಕ್ಟ್ರಿಕಲ್ ಡಕ್ಟ್ಗಳಿಗೆ ಹಾನಿಯಾಗಿರುವುದು ದೃಢಪಟ್ಟಿದೆ.
ಇದನ್ನು ಓದಿ : Bengaluru| ದ್ವಿಚಕ್ರ ವಾಹನಗಳಲ್ಲಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಸ್ಥಳಕ್ಕೆ ಭೇಟಿ
ಘಟನೆಯ ನಂತರ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಆಯುಕ್ತ ಕೆ.ಎನ್. ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವಘಡದ ನಿಖರ ಕಾರಣ ಪತ್ತೆ ಹಚ್ಚಲು ದಕ್ಷಿಣ ನಗರ ಪಾಲಿಕೆ, ಬೆಸ್ಕಾಂ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಸಂಯುಕ್ತ ತನಿಖಾ ತಂಡವನ್ನು ರಚಿಸಲಾಗಿದೆ.
ಎಲ್ಲ ಅಂಗಡಿಗಳು ಮತ್ತು ಕಚೇರಿಗಳು ಕ್ಲೋಸ್
ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಡೀ ಕಟ್ಟಡದ ವಿದ್ಯುತ್ ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ವಿದ್ಯುತ್ ಮಾರ್ಗಗಳ ಪರಿಶೀಲನೆ ಹಾಗೂ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸಂಕೀರ್ಣದೊಳಗಿನ ಎಲ್ಲ ಅಂಗಡಿಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ ಎಂದು ಬೆಂಗಳೂರು ದಕ್ಷಿಣ ಪಾಲಿಕೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ತನಿಖಾ ವರದಿ ನಿರೀಕ್ಷಿಸಲಾಗುತ್ತಿದೆ.
ಇದನ್ನು ನೋಡಿ : ಶಾಸಕರು ಕೆಲಸ ಮಾಡ್ತಿಲ್ಲ ಎಂದ ಸ್ವಾಮೀಜಿ ಫುಲ್ ಗರಂ ಆದ ಶಾಸಕ ಶಿವಲಿಂಗೇಗೌಡ




