
ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ತಾಲೂಕಿನ ಕೀಲುಕುಂಟೆ ಕೆರೆಯಲ್ಲಿ ನಡೆದ ದುರ್ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ವಿಜಯಪುರ ಮೂಲದ 30 ವರ್ಷದ ಟಿಪ್ಪರ್ ಡ್ರೈವರ್ ನವೀನ್ ಎಂಬಾತ ಎಂ-ಸ್ಯಾಂಡ್ ಲೋಡ್ ತರಲು ಕ್ರಷರ್ಗೆ ಹೋಗಿದ್ದ. ಈ ಸಂದರ್ಭದಲ್ಲಿ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ನವೀನ್ ತನ್ನ ಸ್ನೇಹಿತರೊಟ್ಟಿಗೆ ಊಟಕ್ಕೆ ಪಕ್ಕದಲ್ಲಿರುವ ಡಾಬಾಗೆ ತೆರಳಿದ್ದ. ಇನ್ನೂ ಹಿಂತಿರುಗುವ ವೇಳೆ ಬೈಕ್ಗೆ ಪೆಟ್ರೋಲ್ ಖಾಲಿಯಾಗಿದ್ದು, ಸ್ನೇಹಿತರು ಪೆಟ್ರೋಲ್ ತರಲು ಹೋದಾಗ ನವೀನ್ ಕೆರೆ ಕಡೆ ತಿರುಗಿದ್ದ. ಬಟ್ಟೆ, ಮೊಬೈಲ್, ಚಪ್ಪಲಿ ಬಿಟ್ಟು ನೀರಿಗೆ ಇಳಿದ ನವೀನ್ ಈಜುತ್ತಾ ಆಳಕ್ಕೆ ಹೋಗಿ ಮುಳುಗಿದ್ದಾನೆ.

ಕೆರೆಯಲ್ಲಿ ಸುಮಾರು 12 ರಿಂದ 15 ಅಡಿ ಆಳವಿದ್ದು, ನವೀನ್ ನೀರಿನೊಳಗೆ ಕೈ ಎತ್ತಿ ಸಹಾಯ ಬೇಡಿಕೊಂಡಿದ್ದೇನೆ. ಸ್ನೇಹಿತರಿಗೆ ಈಜು ಬಾರದ ಕಾರಣ ಯಾರೂ ನೆರವಾಗಲು ಸಾಧ್ಯವಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಅವನು ನೀರಿನೊಳಗೆ ಮುಳುಗಿ ಹೋದ. ತಕ್ಷಣ ಪೆರೆಸಂದ್ರ ಪೊಲೀಸ್ ಠಾಣೆಗೆ ಮಾಹಿತಿ ತಲುಪಿದ ಪರಿಣಾಮ, ಪಿಎಸ್ಐ ಜಗದೀಶ್ ರೆಡ್ಡಿ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಬಂದು ಹುಡುಕಾಟ ಆರಂಭಿಸಿದರು.
ರಾತ್ರಿ ಕತ್ತಲಾಗಿದ್ದ ಕಾರಣ ಹುಡುಕಾಟವನ್ನು ನಿಲ್ಲಿಸಬೇಕಾಗಿ ಬಂತು. ಬೆಳಿಗ್ಗೆಯಿಂದಲೇ ಪುನಃ ಶೋಧಕಾರ್ಯ ನಡೆಸಿ, ಸುಮಾರು 24 ಗಂಟೆಗಳ ನಂತರ ಸಂಜೆ 4 ಗಂಟೆಗೆ ಮೃತದೇಹ ಪತ್ತೆ ಮಾಡಿದರು. ಪಿಎಸ್ಐ ಜಗದೀಶ್ ಸ್ವತಃ ಕೆರೆಯಲ್ಲಿ ಇಳಿದು ಪರಿಶೀಲನೆ ನಡೆಸಿದ್ರು, ನಂತರ ಮೃತದೇಹವನ್ನು ಹೊರತೆಗೆದರು. ನಂತರ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ನವೀನ್ಗೆ ಇನ್ನೂ ಮದುವೆಯಾಗಿರಲಿಲ್ಲ. ಮನೆ ಮಂದಿ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದ್ದು, ದುರದೃಷ್ಟವಶಾತ್ ಅವನ ಜೀವ ಕೆರೆಯ ಆಳದಲ್ಲಿ ಕೊನೆಗೊಂಡಿದೆ. ಪೆರೆಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.




