
DODDABALLAPURA THEFT : ಸಾರ್ವಜನಿಕರೇ ಎಚ್ಚರ….! ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಠಾಣೆ ಗಳ ಕೂಗಳತೆ ದೂರದಲ್ಲೇ ಚೋರರ ಗ್ಯಾಂಗ್ ಫುಲ್ ಆಕ್ಟಿವ್ ಆಗಿದೆ. “ಮನೆ-ಮನೆಗೆ ಕಳ್ಳರ” ಎಂಟ್ರಿ ಕೊಡುತ್ತಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ್ದ ಖದೀಮರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿಹೊತ್ತು ಎಲ್ಲರೂ ಟಿವಿ ಗೀವಿ ನೋಡಿ, ಊಟಗೀಟ ಮಾಡಿ, ಗಾಢ ನಿದ್ರೆಗೆ ಜಾರಿದ ಮೇಲೆ, ನಡುರಾತ್ರಿ ಕಳ್ಳರ ಓಡಾಟ ಶುರುವಾಗುತ್ತೆ. ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ಕದ್ದ ವಸ್ತುಗಳನ್ನು ತುಂಬಿಕೊಳ್ಳಲು ಬೆನ್ನಿಗೆ ಒಂದು ಬ್ಯಾಗ್ ತಗಲಾಕೊಂಡು, ಕೈಗಳಲ್ಲಿ ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದುಕೊಂಡು, ಅಲ್ಲಲ್ಲಿ ಸಿಸಿಟಿವಿ ಇದ್ರುನೂ ಕ್ಯಾರೆ ಎನ್ನದೆ, ರಾಜಾರೋಷವಾಗಿ ಮನೆಗಳ ಗೇಟ್ ತೆಗೆ ಯೋದು, ಕಾಂಪೌಡ್ ಹತ್ತೋದು, ಕಿಟಕಿಗಳಲ್ಲಿ ಬಗ್ಗಿ ನೋಡೋದು, ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು, ಒಳ ಹೋಗಿ ಕೈಗೆ ಸಿಗುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾರೆ. ಇಂತಹ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಂದಿನಿ ಲೇಔಟ್, ನಿಜಗಲ್ ಲೇಔಟ್, ಯೋಗಿ ನಾರಾಯಣ ಬಡಾವಣೆ ಸುತ್ತಾಮುತ್ತ ಇರುವ ಏರಿಯಾಗಳಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ…. ಕಳ್ಳರ ಚಲನವಲನ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಖದೀಮರ ಭಯಾನಕ ದೃಶ್ಯಗ ಳನ್ನ ಕಂಡ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಸುಮಾರು 2:45ರ ಸಮಯದಲ್ಲಿ ಚೋರರ ಗ್ಯಾಂಗ್ ದೊಡ್ಡಬಳ್ಳಾಪುರ ನಗರದ ನಂದಿನಿ ಲೇಔಟ್, ನಿಜಗಲ್ ಲೇಔಟ್, ಯೋಗಿ ನಾರಾಯಣ ಬಡಾವಣೆ ಸುತ್ತಾಮುತ್ತ ಇರುವ ಏರಿಯಾ ಗಳಲ್ಲಿನ ಮನೆಗಳ ರಾಬರಿಗೆ ಇಳಿದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು, ಜನರು, ನಾಯಿಗಳ ಭಯವಿಲ್ಲದೇ ಇದು ನಮ್ದೆ ಏರಿಯಾ, ನಮ್ದೆ ಮನೆ ಎಂದು ಭಾವಿಸಿ ನಿಶಬ್ಧವಾದ ರಾತ್ರಿ ವೇಳೆ ಹಾದಿಬೀದಿ ಗಳಲ್ಲಿ ಸ್ಮಗ್ಲಿಂಗ್ ಗ್ಯಾಂಗ್ ಓಡಾಡುತ್ತಿದ್ದಾರೆ. ಚೋರರ ಸಂಚಾರದಿಂದ ಎಲ್ಲರಲ್ಲಿ ಸಂಚಲನ ಸೃಷ್ಟಿಸಿದೆ. ಮಂಗಳವಾರ ರಾತ್ರಿ ನಡೆದಿರುವ ಘಟನೆಯಿಂದ ಇಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮಹಿಳೆಯರು, ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ. ಕಳ್ಳಕಾಕರಿಂದ ನಮಗೆ ರಕ್ಷಣೆ ಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.
ಮಂಗಳವಾರ ರಾತ್ರಿ ನಡೆದ ಘಟನೆಯಿಂದ ನಾವು ತುಂಬಾನೇ ಭಯಭೀತರಾಗಿದ್ದೇವೆ. ಜೀವ ಭಯದಲ್ಲಿ ರಾತ್ರಿಗಳನ್ನ ಕಳೆಯುತ್ತಿದ್ದೇವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಪೊಲೀಸ್ ಇಲಾಖೆಯು ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಇದು ನೆಪ ಮಾತ್ರಕ್ಕೆ ಇದೆ. ನಮ್ಮ ಏರಿಯಾದ ಮನೆಗಳಿಗೆ ಯಾವೊಬ್ಬ ಪೊಲೀಸ್ ಸಿಬ್ಬಂದಿ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಗಳನ್ನು ಆಲಿಸಿಲ್ಲ. ಬೀಟ್ ಕಾನ್ಸ್ಟೆಬಲ್ಗಳು, ಇನ್ಸ್ಪೆಕ್ಟರ್ಗಳು ಮತ್ತು ಪೊಲೀಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ದತ್ತಸಂಚ ಯವನ್ನು ನಿರ್ವಹಿಸುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಕಳ್ಳರ ಕಾಟದಿಂದ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳ ಕೂಗಳತೆ ದೂರ ದಲ್ಲಿರುವ ನಮ್ಮ ಮನೆಗಳ ಬಳಿ ಕಳ್ಳರು ಓಡಾಡುತ್ತಿದ್ದಾರೆ. ನಾವು ವಾಸ ಮಾಡುತ್ತಿರುವ ಏರಿಯಾಗಳ ಖಾಲಿ ಜಾಗಗಳು ಕುಡುಕರ ತಾಣವಾಗಿವೆ. ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನಮಗೆ ಪೊಲೀಸರ ಸೂಕ್ತ ರಕ್ಷಣೆ ಅತ್ಯವಶ್ಯಕವಾಗಿ ಬೇಕೇಬೇಕು. ಕೂಡಲೇ ಪೊಲೀಸ್ ಬೀಟ್ ಹೆಚ್ಚಿಸಬೇಕು. ಕಳ್ಳರ ಹೆಡೆಮುರಿ ಕಟ್ಟಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.




